ADVERTISEMENT

ಲಕ್ಷ್ಮೀನಾರಾಯಣ ಮರು ಆಯ್ಕೆ ಮಾಡಿ: ದೇವಾಂಗ ಮಂಡಳಿಯ ಎಂ.ಜಿ.ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:18 IST
Last Updated 12 ಜೂನ್ 2020, 12:18 IST
ದೇವಾಂಗ ಮಂಡಳಿ ಕಾರ್ಯದರ್ಶಿ ಕೇಶವ ಮಾತನಾಡಿದರು
ದೇವಾಂಗ ಮಂಡಳಿ ಕಾರ್ಯದರ್ಶಿ ಕೇಶವ ಮಾತನಾಡಿದರು   

ದೊಡ್ಡಬಳ್ಳಾಪುರ: ನೇಕಾರಿಕೆ ಪರವಾಗಿ ವಿಧಾನ ಸಭೆಯಲ್ಲಿ ಸದಾ ಧ್ವನಿ ಎತ್ತುವ ಮೂಲಕ ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿರುವ ಹಾಲಿ ವಿಧಾನ ಪರಿಷತ್‌ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ಮರು ಆಯ್ಕೆ ಮಾಡಬೇಕು ಎಂದು ದೇವಾಂಗ ಮಂಡಳಿ ಹಿರಿಯ ಮುಖಂಡ ಎಂ.ಜಿ.ಶ್ರೀನಿವಾಸ್‌ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ದೇವಾಂಗ ಮಂಡಳಿ ಅವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲಕ್ಷ್ಮೀನಾರಾಯಣ್ ಅವರಿಗೆ ನೇಕಾರಿಕೆ ಉದ್ಯಮದ ಬಗ್ಗೆ ಆಳವಾದ ಜ್ಞಾನವಿದೆ. ನೇಕಾರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಸೌಲಭ್ಯ ದೊರಕಿಸಿಕೊಡುವಲ್ಲಿ ಉಮಾಶ್ರೀ ಹಾಗೂ ಲಕ್ಷ್ಮೀನಾರಾಯಣ್‌ ಅವರ ಹೋರಾಟ ಸ್ಮರಣೀಯ. ವಿದ್ಯುತ್‌ ರಿಯಾಯಿತಿ ದೊರೆಯದೇ ಹೋಗಿದ್ದರೆ ರಾಜ್ಯದಲ್ಲಿ ವಿದ್ಯುತ್‌ ಮಗ್ಗಗಳೇ ಕಣ್ಮರೆಯಾಗಿರುತಿದ್ದವು ಎಂದು ಹೇಳಿದರು.

ADVERTISEMENT

ನೇಕಾರರ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವ ಅವರನ್ನು ಮತ್ತೊಮ್ಮೆ ಮೇಲ್ಮನೆಗೆ ಆಯ್ಕೆ ಮಾಡಬೇಕು. ಈ ಬಗ್ಗೆ ಕಾಂಗ್ರೆಸ್‌ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಮಾರುಕಟ್ಟೆ ಸೌಲಭ್ಯ:ದೇವಾಂಗ ಮಂಡಳಿ ಕಾರ್ಯದರ್ಶಿ ಕೇಶವ ಮಾತನಾಡಿ, ನಗರದಲ್ಲಿ ನೇಕಾರರು ಸೀರೆ ವ್ಯಾಪಾರ ಮಾಡಲು ವಾಣಿಜ್ಯ ಮಳಿಗೆ ನಿರ್ಮಿಸಲು ಅನುಕೂಲವಾಗುವಂತೆ ಸಿ.ಎಸ್‌.ಕರೀಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ ನಗರದ ಡಿ.ಕ್ರಾಸ್‌ನ ಬೆಂಗಳೂರು-ಹಿಂದೂಪುರ ಹೆದ್ದಾರಿ ಬದಿಯಲ್ಲೇ ಭೂಮಿ ಮಂಜೂರು ಮಾಡಿದ್ದಾರೆ. ಈ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ನಗರದಲ್ಲಿ ನೇಯುವ ಸೀರೆಗಳಿಗೆ ಇಲ್ಲಿಯೇ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ನೇರವಾಗಿ ಗ್ರಾಹಕರಿಗೆ ತಲುಪುವಂತೆ ಮಂಡಳಿ ಮಾಡಲಿದೆ ಎಂದರು.

ಸಿ.ಎಸ್‌.ಕರೀಗೌಡ ಅವರು, ಇಲ್ಲಿ ನೇಯುವ ಸೀರೆಗಳಿಗೆ ಬ್ರಾಂಡ್‌ ಕಲ್ಪಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ್ದ ಪ್ರಯತ್ನವನ್ನು ಯಶಸ್ವಿಗೊಳಿಸಲು ಸದ್ಯದಲ್ಲೇ ಮಂಡಳಿ ವತಿಯಿಂದ ಸಭೆ ನಡೆಸಲಾಗುವುದು. ಲಾಕ್‌ಡೌನ್‌ ಸಂದರ್ಭದಲ್ಲಿ ರೈತರು ಹಣ್ಣು, ತರಕಾರಿಗಳಿಗೆ ನೇರ ಮಾರುಕಟ್ಟೆ ಕಂಡುಕೊಂಡಂತೆ ನೇಕಾರರು ತಾವು ನೇಯುವ ಸೀರೆಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಅನಿವಾರ್ಯ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದರು.

ದೇವಾಂಗ ಮಂಡಳಿ ಪ್ರಭಾರ ಅಧ್ಯಕ್ಷ ಕೆ.ಜಿ.ದಿನೇಶ್‌, ಸಹಕಾರ್ಯದರ್ಶಿ ಯೋಗ ನಟರಾಜ್‌ ಹಾಗೂ ಮಂಡಳಿಯ ನಿರ್ದೇಶಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.