ADVERTISEMENT

‘ಸೋದರರಿಬ್ಬರ ವೈಮನಸ್ಸಿನಿಂದ ವಿಳಂಬ’

ಚಂದೇನಹಳ್ಳಿಯ ಬಸವಕಲ್ಯಾಣ ಮಠದ ಉತ್ತರಾಧಿಕಾರಿ ನೇಮಕ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 13:21 IST
Last Updated 13 ಡಿಸೆಂಬರ್ 2018, 13:21 IST
ವಿಜಯಪುರದ ಬಸವ ಕಲ್ಯಾಣ ಮಠ
ವಿಜಯಪುರದ ಬಸವ ಕಲ್ಯಾಣ ಮಠ   

ವಿಜಯಪುರ: ಇಲ್ಲಿನ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಮಠದ ಅಧ್ಯಕ್ಷ ಮಹದೇವಸ್ವಾಮೀಜಿ ಹಾಗೂ ಅವರ ಸಹೋದರ ಗಣೇಶ್ ನಡುವಿನ ವೈಯಕ್ತಿಕ ವಿಚಾರವಾಗಿ ಬಿಕ್ಕಟ್ಟು ಶುರುವಾಗಿದ್ದು, ಉತ್ತರಾಧಿಕಾರಿ ನೇಮಕ ವಿಳಂಬವಾಗುವ ಸಾಧ್ಯತೆ ಇದೆ.

ಈ ಕುರಿತು ಗುರುವಾರ ‘ಪ್ರಜಾವಾಣಿ’ಯೊಂದಿಗೆ ಗಣೇಶ್ ಮಾತನಾಡಿ, ‘ಉತ್ತರಾಧಿಕಾರಿ ಸ್ಥಾನಕ್ಕಾಗಿ ಒಂದು ತಿಂಗಳಿನಿಂದ ಬಿಕ್ಕಟ್ಟು ನಡೆಯುತ್ತಿದೆ. 30 ವರ್ಷದಿಂದ ಮಠದ ಬೆಳವಣಿಗೆಗೆ ಹಗಲಿರುಳು ಎಲ್ಲಾ ಜವಾಬ್ದಾರಿ ಹೊತ್ತು ಶ್ರಮಿಸುತ್ತಿದ್ದೇನೆ. ಸೋದರ ಹಾಗೂ ಮಠದ ಅಧ್ಯಕ್ಷ ಮಹದೇವಸ್ವಾಮೀಜಿ ಅವರು ನನ್ನ ಪುತ್ರನಾದ ಗೌರೀಶನನ್ನು ಮಠದ ಉತ್ತರಾಧಿಕಾರಿ ನೇಮಕ ಮಾಡುವ ಪ್ರಸ್ತಾವ ಮುಂದಿಟ್ಟರು. ಸ್ವಗ್ರಾಮವಾದ ಮಂಡ್ಯ ತಾಲ್ಲೂಕಿನ ಬೆಳಗೂಲಿ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು 18 ವರ್ಷ ಪೂರ್ತಿಯಾದ ಮೇಲೆ ಕಳುಹಿಸಿಕೊಡುವುದಾಗಿ ತಿಳಿಸಿದ್ದೆ’ ಎಂದು ಗಣೇಶ್ ಹಿನ್ನೆಲೆ ವಿವರಿಸಿದರು.

‌‘ನನ್ನ ಪುತ್ರನಿಗೆ ಈಗ 18ವರ್ಷ ತುಂಬಿ 19ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಕೊಟ್ಟ ಮಾತಿನಂತೆ ಈಗ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಬೇಕು. ಆದರೆ, ಸೋದರ ಮಹದೇವಸ್ವಾಮೀಜಿ ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಲ್ಲದೆ, ಕೆಲವರ ಮಾತಿಗೆ ಮರುಳಾಗಿ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಮಠ ತೊರೆಯುವಂತೆ ತಾಕೀತು ಮಾಡಿದ್ದಾರೆ’ ಎಂದು ಗಣೇಶ್‌ ಆರೋಪಿಸಿದರು.

ADVERTISEMENT

‘ಈ ಘಟನೆಯಿಂದ ಅವಮಾನವಾಗಿದೆ. ನಮ್ಮಿಂದ ಏನು ತಪ್ಪಾಗಿದೆ. ನಾವು ಏಕೆ ಮಠ ತೊರೆಯಬೇಕು. ಈ ಪ್ರಶ್ನೆಗಳಿಗೆ ಯಾರಿಂದಲೂ ಉತ್ತರ ಸಿಗುತ್ತಿಲ್ಲ. ಸಿದ್ಧಗಂಗಾಮಠದಲ್ಲಿ ನ್ಯಾಯಕ್ಕೆ ಮೊರೆ ಇಡುವುದಾಗಿ’ ಅವರು ತಿಳಿಸಿದರು.

ಉತ್ತರಾಧಿಕಾರಿ ನೇಮಕ ಮುಂದೂಡಿಕೆ: ಮಠ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. ಉತ್ತರಾಧಿಕಾರಿ ನೇಮಕಕ್ಕೆ ಉತ್ತಮ ಜ್ಞಾನಸಂಪನ್ನರು ಅವಶ್ಯ. ಮಠ ಪರಂಪರೆ ಬಗ್ಗೆ ತಿಳದಿರಬೇಕು. ‌ಜಾತಿ, ವರ್ಗ ಎನ್ನದೆ ಎಲ್ಲರನ್ನು ಪ್ರೀತಿಸುವ ಗುಣ ಇರಬೇಕು. ಕೆಲ ಧಾರ್ಮಿಕ ಕಠಿಣ ನಿಯಮ ಪಾಲಿಸುವ ಪರಿಶುದ್ಧ ಮನಸ್ಸಿನ ವ್ಯಕ್ತಿಗಳ ಅವಶ್ಯವಿದೆ. ಸಂಬಂಧಿಕರು ಎನ್ನುವುದಕ್ಕಿಂತಲೂ ಎಲ್ಲಾ ಗುಣಗಳನ್ನು ಪರಿಶೀಲಿಸಿ ನೇಮಕ ಮಾಡಬೇಕಾಗುತ್ತದೆ. ಹಾಗಾಗಿ ತಕ್ಷಣಕ್ಕೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನೇಮಕ ವಿಚಾರ ಮಂದೂಡಿಲಾಗಿದೆ ಎಂದು ಮಹದೇವಸ್ವಾಮೀಜಿ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.