ADVERTISEMENT

ಫಲಿತಾಂಶದಿಂದ ಬಿಜೆಪಿ ಸರ್ಕಾರ ಸುಭದ್ರ: ಬಿ.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:43 IST
Last Updated 9 ಡಿಸೆಂಬರ್ 2019, 13:43 IST
ದೇವನಹಳ್ಳಿಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು
ದೇವನಹಳ್ಳಿಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು   

ದೇವನಹಳ್ಳಿ: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪಾರಮ್ಯ ಮೆರೆದಿದ್ದು, ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರದ ಸುಭದ್ರತೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಬಿ.ರಾಜಣ್ಣ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ಬಿಜೆಪಿ 12 ಸ್ಥಾನ ಪಡೆದ ಪರಿಣಾಮ ಪ್ರಸ್ತುತ 118 ಶಾಸಕರು ಇದ್ದಾರೆ. ಸುಭದ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೈ ಬಲ ಪಡಿಸಲು ಜನತೆ ಮುಂದಾಗಿರುವುದು ಮತ್ತಷ್ಟು ವಿಶ್ವಾಸ ತುಂಬಿದೆ ಎಂದರು.

ಹೊಸಕೋಟೆ ಕ್ಷೇತ್ರದಲ್ಲಿ ಸ್ವಲ್ಪ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಇದೇ ಲೋಕಸಭೆ ಕ್ಷೇತ್ರದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೆ.ಸುಧಾಕರ್ ಗೆಲವು ಸಾಧಿಸಿದ್ದಾರೆ. ಉತ್ತಮ ಆಡಳಿತ ನಡೆಸಲು ಮತದಾರರು ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿದರು.

ADVERTISEMENT

ಯಡಿಯೂರಪ್ಪ ಅವರು ನೀಡಿದ ಭರವಸೆಯಂತೆ ಹೊಸಕೋಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ ನಗರಕ್ಕೆ ಮೆಟ್ರೊ ರೈಲು ಯೋಜನೆ ಮತ್ತು ಮಂಚೇನಹಳ್ಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿದ ಮತದಾರರಿಗೆ ಅಭಿನಂದನೆಗಳು ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್ ಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರದ ಆಡಳಿತ ವೈಫಲ್ಯದಿಂದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯದ ಕೊರತೆ, ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದರು. ಫಲಿತಾಂಶದಿಂದ ಸರ್ಕಾರ ಜವಾಬ್ದಾರಿಯುತವಾಗಿ ಅಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ರೈತ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ರಾಜ್‌ಗೋಪಾಲ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಮಂಜುನಾಥ್, ರಮೇಶ್, ನಿಲೇರಿ ಮಂಜುನಾಥ್, ಧನಂಜಯ, ಗಿರೀಶ್, ಕನಕರಾಜು, ಗೋಕರೆ ಗೋಪಾಲ್, ರಾಧಾಕೃಷ್ಣ, ಭೀಮ್ ರಾಜ್, ವೆಂಕಟೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.