ವಿಜಯಪುರ (ಬೆಂ.ಗ್ರಾಮಾಂತರ):ದೇವನಹಳ್ಳಿ ತಾಲ್ಲೂಕಿನ ಕುಂದಾಣ ಬೆಟ್ಟದಲ್ಲಿ ಸೆ. 11ರಂದು ಬುದ್ಧಿಸ್ಟ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ರಾಜ್ಯ ಶಾಖೆಯಿಂದ ರಾಜ್ಯ ಪ್ರಥಮ ಬೌದ್ಧ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ವಿಜಯಪುರ ಹೋಬಳಿಯ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.
ರಾಜ್ಯ ಶಾಖೆಯ ಅಧ್ಯಕ್ಷ ಎಸ್. ಸಿದ್ಧಾರ್ಥ ಮಾತನಾಡಿ, ಕುಂದಾಣ ಭಾಗದಲ್ಲಿ ಬುದ್ಧನ ಇತಿಹಾಸ ನಮಗೆ ಸಿಗುತ್ತದೆ. ಪಳೆಯುಳಿಕೆಗಳು ಇವೆ. ಈ ಕಾರಣದಿಂದ ಕುಂದಾಣ ಬೆಟ್ಟದಲ್ಲಿ ರಾಜ್ಯದ ಪ್ರಥಮ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಎಲ್ಲಾ ಹೋಬಳಿಗಳಲ್ಲಿ ಮುಖಂಡರೊಟ್ಟಿಗೆ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಬುದ್ಧ ಭಾರತದಲ್ಲಿ ಹುಟ್ಟಿದರೂ ಅವರ ಸಂದೇಶಗಳು ಇಲ್ಲಿ ಪ್ರಚಲಿತವಾಗಲಿಲ್ಲ. ಬೌದ್ಧ ಧರ್ಮವನ್ನೇ ಗೌಣ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬುದ್ಧನ ಕುರಿತು ಚಿಂತನೆ ಮಾಡಿ ಆತನ ಸಂದೇಶಗಳನ್ನು ಎಲ್ಲೆಡೆ ಸಾರುವ ಮೂಲಕ ದೇಶದಲ್ಲಿ ಶಾಂತಿ ಸ್ಥಾಪನೆ ಮಾಡಬೇಕಾಗಿರುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ 1,500ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಬೌದ್ಧ ಭಿಕ್ಕುಗಳು ಕೂಡ ಭಾಗವಹಿಸುತ್ತಿದ್ದು, ಧಮ್ಮ ದೀಕ್ಷೆ ನೀಡಲಾಗುತ್ತಿದೆ ಎಂದರು.
ಬುದ್ಧಿಸ್ಟ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ಸಂಚಾಲಕ ಎಂ. ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಲೆಸಬೇಕಾಗಿದೆ. ಎಲ್ಲೆಲ್ಲೂ ದೌರ್ಜನ್ಯ, ದಬ್ಬಾಳಿಕೆ, ಭ್ರಷ್ಟಾಚಾರ, ದುರಾಡಳಿತ ತಾಂಡವವಾಡುತ್ತಿದೆ. ಜನರಲ್ಲಿ ನೆಮ್ಮದಿಯಿಲ್ಲದಂತಾಗಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಬುದ್ಧನ ಶಾಂತಿ ಸಂದೇಶ ಪಸರಿಸುವ ಮೂಲಕ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕಾಗಿದೆ ಎಂದು ಆಶಿಸಿದರು.
ಈ ನಿಟ್ಟಿನಲ್ಲಿ ಸಮ್ಮೇಳನ ಮಹತ್ವದ್ದಾಗಿದೆ. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಈ ಸಮ್ಮೇಳನಗಳು ನಡೆಯಲಿದ್ದು, ಕುಂದಾಣದಿಂದ ಆರಂಭವಾಗಲಿದೆ ಎಂದರು.
ರಾಜ್ಯ ಉಸ್ತುವಾರಿ ಗಣೇಶ್ ಕಾಂಬ್ಳೆ ಮಾತನಾಡಿ, ಪ್ರಥಮ ಸಮ್ಮೇಳನದಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಬರಲಿವೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಹಲವಾರು ವಿಚಾರವಾದಿಗಳು ಭಾಗವಹಿಸುತ್ತಿದ್ದಾರೆ. ಬುದ್ಧನ ಬಗೆಗಿನ ಹಲವಾರು ಗೊಂದಲಗಳನ್ನು ಪರಿಹರಿಸಲಿದ್ದಾರೆ ಎಂದರು.
ಬುದ್ಧಿಸ್ಟ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ಸಂಚಾಲಕರಾದ ವೆಂಕಟರಾಮ್, ಚಕ್ರವರ್ತಿ, ಜಿ. ನಾರಾಯಣಪ್ಪ, ಸುಭ್ರಮಣ್ಯ, ವೆಂಕಟೇಶಯ್ಯ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.