ADVERTISEMENT

ಮತದಾರರ ಓಲೈಕೆಗೆ ರಾಜಕಾರಣಿಗಳಿಂದ ಬಸ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 5:32 IST
Last Updated 7 ಜನವರಿ 2023, 5:32 IST
ವಿಜಯಪುರ ಪಟ್ಟಣದಲ್ಲಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು
ವಿಜಯಪುರ ಪಟ್ಟಣದಲ್ಲಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು   

ವಿಜಯಪುರ(ದೇವನಹಳ್ಳಿ): ಚುನಾವಣೆ ದೃಷ್ಟಿಯಿಂದ ರಾಜಕಾರಣಿಗಳು ತಮ್ಮ ಕ್ಷೇತ್ರದ ಜನರು ಓಂ ಶಕ್ತಿ , ಶಬರಿ ಮಲೆ ಸೇರಿದಂತೆ ವಿವಿಧ ಯಾತ್ರೆಗಳಿಗೆ ತೆರಳಲು ಉಚಿತವಾಗಿ ಬಸ್‌ ವ್ಯವಸ್ಥೆ ಮಾಡುತ್ತಿರುವುದು ವಿದ್ಯಾರ್ಥಿಗಳು ಪರದಾಟಕ್ಕೆ ಕಾರಣವಾಗಿದೆ.

ಮತದಾರರ ಓಲೈಕೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಸ್ಥಳೀಯರು ಮುಖಂಡರು ಕೆಎಸ್‌ಆರ್‌ಟಿ ಬಸ್‌ಗಳನ್ನು ಮುಗಂಡವಾಗಿ ಕಾಯ್ದುರಿಸುತ್ತಿದ್ದಾರೆ. ಇದರಿಂದ ಬಸ್‌ಗಳ ಕೊರತೆ ಉಂಟಾಗಿದ್ದು, ವಿದ್ಯಾರ್ಥಿಗಳು ಸರಿಯಾದ ಶಾಲಾ–ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಬರುವ ಕೆಲ ಬಸ್‌ಗಳು ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಕುರಿಗಳಂತೆ ತುಂಬಿಕೊಂಡು ಹೋಗಲಾಗುತ್ತಿದೆ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಹತ್ತಬೇಕಿದೆ. ಬಸ್‌ ಬಾಗಿಲಿನಲ್ಲೆ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವ ದೃಶ್ಯಗಳು ಪಟ್ಟಣದಲ್ಲಿ ಕಂಡು ಬರುತ್ತಿದೆ.

ಪಟ್ಟಣದಿಂದ ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಮುಂತಾದ ಕಡೆಗಳಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿ ಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ ವ್ಯವಸ್ಥೆಯಿಲ್ಲ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆ ವರೆಗೂ ಬಸ್ಸಿಗಾಗಿ ಕಾಯಬೇಕಿದೆ. ಬಿಎಂಟಿಸಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿವೆ. ಪಾಸ್‌ ಮಾಡಿಸಿಕೊಂಡಿರುವವರನ್ನು ಬಿಎಂಟಿಸಿ ಬಸ್‌ಗಳು ಹತ್ತಿಸಿಕೊಳ್ಳುತ್ತಿಲ್ಲ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ADVERTISEMENT

ಡಿ.25 ರಿಂದ ಜ.15 ವರೆಗೂ ಬಸ್‌ಗಳು ಬುಂಕಿಂಗ್‌ ಆಗಿದೆ. 15ರ ಬಳಿಕ ಬಸ್‌ ಸಮಸ್ಯೆ ಇರುವುದಿಲ್ಲ. ಬಿಎಂಟಿಸಿ ಬಸ್‌ಗಳಲ್ಲಿಯೂ ಪಾಸ್ ಕೊಡ್ತಿದ್ದಾರೆ. ಅಲ್ಲಿ ಕೂಡಾ ವಿದ್ಯಾರ್ಥಿಗಳು ಪಾಸ್ ತೆಗೆದುಕೊಂಡು ಹೋಗಬಹುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.