ADVERTISEMENT

ದೊಡ್ಡಬಳ್ಳಾಪುರ: ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:56 IST
Last Updated 30 ನವೆಂಬರ್ 2021, 5:56 IST
ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಸೋಮವಾರ ಶ್ರೀಪ್ರಸನ್ನ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು
ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಸೋಮವಾರ ಶ್ರೀಪ್ರಸನ್ನ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು   

ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿ ಶ್ರೀಪ್ರಸನ್ನ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಮುಜರಾಯಿ ಇಲಾಖೆ ಹಾಗೂ ದೇವಾಲಯದ ಭಕ್ತ ಮಂಡಳಿಯಿಂದ ತಾಲ್ಲೂಕು ತಹಶೀಲ್ದಾರ್‌ ಉಸ್ತುವಾರಿಯಲ್ಲಿ ನಡೆದ ಬ್ರಹ್ಮ ರಥೋತ್ಸವದಲ್ಲಿ ವಿವಿಧೆಡೆಯಿಂದಆಗಮಿಸಿದ್ದ ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಅರ್ಪಿಸಿ ಧನ್ಯತಾ ಭಾವ ಮೆರೆದರು.

ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಣ್ಣ ರಥದಲ್ಲಿ ಸಾಂಕೇತಿಕವಾಗಿ ರಥೋತ್ಸವ ಆಚರಿಸಲಾಗಿತ್ತು. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಿತು. 5 ಅಡಿ ಕಲ್ಲಿನ ಚಕ್ರಗಳ ಮೇಲೆ, ಐದು ಅಂತಸ್ತುಗಳ ಶಿವನ ವಿವಿಧ ರೂಪ, ಅವತಾರಗಳನ್ನು ಹೊಂದಿರುವ ಚಿತ್ರಪಟಗಳು ಹಾಗೂ ತಳಿರುತೋರಣಗಳಿಂದ ಭವ್ಯ ರಥವು ಸಿಂಗಾರಗೊಂಡಿತ್ತು. ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಶ್ರೀಕಂಠೇಶ್ವರ ಭಕ್ತ ಮಂಡಳಿ, ನಂಜುಂಡೇಶ್ವರ ಸೇವಾ ಸಮಿತಿ ಸೇರಿದಂತೆ ವಿವಿಧ ಅರವಂಟಿಗೆ ಸಮಿತಿಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ರಥೋತ್ಸವದಲ್ಲಿ ತಹಶೀಲ್ದಾರ್ ಟಿ.ಎಸ್. ಶಿವರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.