ADVERTISEMENT

ಚನ್ನಹಳ್ಳಿ: ಪ್ರೌಢಶಾಲಾ ಕ್ರೀಡಾಕೂಟ

ಕ್ರೀಡಾ ಜ್ಯೋತಿ ಸ್ವೀಕರಿಸಿದ ಬಿಇಒ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:35 IST
Last Updated 22 ಜುಲೈ 2022, 5:35 IST
ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಹೋಬಳಿಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕ್ರೀಡಾ ಜ್ಯೋತಿ ಸ್ವೀಕರಿಸಿದರು
ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಹೋಬಳಿಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕ್ರೀಡಾ ಜ್ಯೋತಿ ಸ್ವೀಕರಿಸಿದರು   

ವಿಜಯಪುರ:ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ನಡೆಯಿತು.

ಚನ್ನರಾಯಪಟ್ಟಣ ಹೋಬಳಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಮೇಲಾಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದ್ದ ಪ್ರಥಮ ಚಿಕಿತ್ಸಾ ಬಾಕ್ಸ್‌ನೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿಮಾಜಿ ಅಧ್ಯಕ್ಷ ಬಿ. ರಾಜಣ್ಣ ಮಾತನಾಡಿ, 2019ರಿಂದ ಸತತವಾಗಿ ಕಾಡಿದ ಕೊರೊನಾ ಕಾರಣದಿಂದ ಶಾಲೆಗಳಲ್ಲಿ ಕ್ರೀಡಾಕೂಟ ಆಯೋಜನೆ ಸಾಧ್ಯವಾಗದ ಕಾರಣ ವಿದ್ಯಾರ್ಥಿಗಳು ಕ್ರೀಡಾಕೂಟದಿಂದ ವಂಚಿತರಾಗಿದ್ದರು. ಕೊರೊನಾ ಭೀತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಯೋಜನೆಗೊಳ್ಳುತ್ತಿರುವ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಧರ್ಮ ಪಾಲಿಸಬೇಕು. ಕ್ರೀಡೆಗಳು ಕಲಿಕೆಗೆ ಹೆಚ್ಚು ಸಹಕಾರಿಯಾಗುತ್ತವೆ. ಜ್ಞಾಪಕ ಶಕ್ತಿ ಹೆಚ್ಚಾಗುವುದರ ಜೊತೆಗೆ ದೈಹಿಕ ಸದೃಢತೆ ಕಾಪಾಡುತ್ತದೆ. ಸರ್ಕಾರಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು
ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಕೆಲವು ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಕಡಿಮೆಯಿದ್ದರೂ ಕ್ರೀಡೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸುತ್ತಾರೆ. ಅಂತಹವರು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು
ತಿಳಿಸಿದರು.

ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದವರಿಗೆ ಪೊಲೀಸ್, ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಇಂತಹ ಅವಕಾಶ ಕಳೆದುಕೊಳ್ಳದೆ ಉತ್ತಮ ಸಾಧನೆಯೊಂದಿಗೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು
ಎಂದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು. ಅವರಲ್ಲಿನ ಪ್ರತಿಭೆ ಗುರುತಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಇಲಾಖೆಯ ಸಂಯೋಜಕಿ ಗಾಯಿತ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಬೂಬ್ ಪಾಷ, ಮುಖ್ಯಶಿಕ್ಷಕ ಮುನಿರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ನರಸಿಂಹಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕಲಾ ಮುನಿರಾಜು, ಗೋಪಿನಾಥ್, ದೇವರಾಜ್, ಶಿಲ್ಪಾ ಭೈರೇಗೌಡ, ವೈದ್ಯಾಧಿಕಾರಿ ಡಾ.ಖಾಜೀಯಾ ಫರ್ವಿನ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಎನ್. ವೇಣುಗೋಪಾಲ್, ಸಿ.ಆರ್. ರಾಜಣ್ಣ, ನಂದೀಶ್, ಶಿವಾನಂದ್, ಟಿ. ಅಗ್ರಹಾರ ಮುನೇಗೌಡ, ಲೋಕೇಶ್, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.