ADVERTISEMENT

ನೆಮ್ಮದಿಗೆ ದೇವಾಲಯ ಸಹಕಾರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:03 IST
Last Updated 6 ಫೆಬ್ರುವರಿ 2020, 14:03 IST
ವಿಜಯಪುರದ ನಗರೇಶ್ವರಸ್ವಾಮಿ ದೇವಾಲಯದ ಛಾವಣಿ ಅಳವಡಿಸುವ ಕಾಮಗಾರಿಯನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಮುಖಂಡರೊಂದಿಗೆ ವೀಕ್ಷಿಸಿದರು
ವಿಜಯಪುರದ ನಗರೇಶ್ವರಸ್ವಾಮಿ ದೇವಾಲಯದ ಛಾವಣಿ ಅಳವಡಿಸುವ ಕಾಮಗಾರಿಯನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಮುಖಂಡರೊಂದಿಗೆ ವೀಕ್ಷಿಸಿದರು   

ವಿಜಯಪುರ: ‘ನೆಮ್ಮದಿಯ ಜೀವನಕ್ಕೆ ದೇವಾಲಯ ಹಾಗೂ ಧಾರ್ಮಿಕ ಆಚರಣೆಗಳು ಸಹಕಾರಿ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ನಗರೇಶ್ವರಸ್ವಾಮಿ ದೇವಾಲಯಕ್ಕೆ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಮಾತ್ಮನಿಂದಲೇ ಎಲ್ಲರ ರಕ್ಷಣೆ ಸಾಧ್ಯವಾಗಿದ್ದು, ಪ್ರತಿಕ್ಷಣ, ಪ್ರತಿನಿಮಿಷ ದೇವರ ಸ್ಮರಣೆ ಮಾಡುತ್ತಾ ನಮ್ಮ ಕರ್ತವ್ಯ ನಿರ್ವಹಿಸಿದರೆ ಯಾವ ಕಷ್ಟವೂ ಸುಳಿಯುವುದಿಲ್ಲ. ಜೀವನದಲ್ಲಿ ನೆಮ್ಮದಿ ಕಂಡುಕೊಂಡಾಗ ಯಾವುದೇ ಕಷ್ಟಕಾರ್ಪಣ್ಯಗಳಿಲ್ಲದೆ ಸುಖಜೀವನ ನಡೆಸಬಹುದು.
ಪುರಾತನ ಕಾಲದಿಂದಲೂ ಗ್ರಾಮದ ಜನರು ಸುಖ, ಶಾಂತಿಯಿಂದ ಬದುಕಲು ಭಾರತೀಯ ಸಂಸ್ಕೃತಿ ಪರಂಪರೆಯಂತೆ ಧಾರ್ಮಿಕ ಆಚರಣೆ ಕೈಗೊಂಡು ಬರುತ್ತಿದ್ದಾರೆ. ಇಂದಿಗೂ ಕೂಡ ಆ ಪರಂಪರೆ ನಮ್ಮಲ್ಲಿ ಉಳಿದಿದೆ. ಧಾರ್ಮಿಕ ಆಚರಣೆ ಮತ್ತು ದೇವಾಲಯಗಳು ಗ್ರಾಮದ ಜನರನ್ನು ಒಟ್ಟುಗೂಡಿಸಿ ನೆಮ್ಮದಿ ಜೀವನಕ್ಕೆ ದಾರಿ ಮಾಡಿಕೊಡುತ್ತವೆ. ಇಂತಹ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಹೊಣೆ’ ಎಂದರು.

ADVERTISEMENT

ನಗರೇಶ್ವರಸ್ವಾಮಿ ದೇವಾಲಯದ ಗೌರವ ಅಧ್ಯಕ್ಷ ಪ್ರಭುದೇವ್ ಮಾತನಾಡಿ, ‘ಧಾರ್ಮಿಕ ಕಾರ್ಯಕ್ರಮ ಹೆಚ್ಚು ಮಾಡುವುರಿಂದ ಸ್ಥಳೀಯರಲ್ಲಿ ಶಾಶ್ವತ ನಂಬಿಕೆ, ಸ್ನೇಹ, ಬಾಂಧವ್ಯ ವೃದ್ಧಿಸುತ್ತದೆ. ಗ್ರಾಮಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವಕರು, ಹಿರಿಯರು ಒಟ್ಟಾಗಿ ಪರಸ್ಪರ ಸ್ನೇಹ ಸೌಹಾರ್ದದಿಂದ ತೊಡಗಿಸಿಕೊಂಡಾಗ ಮಾತ್ರವೇ ಇಂತಹ ಕಾರ್ಯಕ್ರಮ ಅನುಷ್ಠಾನ ಸಾಧ್ಯ. ಜನರು ನಮ್ಮ ಪುರಾತನ ಸಂಸ್ಕೃತಿ ಮರೆಯದೆ ಧಾರ್ಮಿಕ ಕೈಂಕರ್ಯಗಳನ್ನು ಮಾಡುತ್ತಾ ಸುಖ ಜೀವನದ ನಡೆಸುವಂತಾಗಬೇಕು’ ಎಂದರು.

ಅಧ್ಯಕ್ಷ ಎಂ.ಆರ್.ಸುರೇಶ್ ಮಾತನಾಡಿ, ‘ಪಟ್ಟಣದ ದೇವಾಲಯಗಳ ನಗರಿಯೆಂದೇ ಖ್ಯಾತಿ ಗಳಿಸಿಕೊಂಡಿದ್ದರೂ ಅಭಿವೃದ್ಧಿಯಿಂದ ಹಿಂದುಳಿದಿದೆ. ಹಲವು ಇತಿಹಾಸ ಪ್ರಸಿದ್ಧ ದೇವಾಲಯಗಳು ಇಲ್ಲಿರುವುದರಿಂದ ಪಟ್ಟಣದ ಎಲ್ಲಾ ದೇವಾಲಯಗಳನ್ನು ಜೀಣೋದ್ಧಾರಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಪಟ್ಟಣದ ಅಭಿವೃದ್ಧಿಯ ಜೊತೆಗೆ, ಇಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

‘ವರ್ಷದಲ್ಲಿ ಹಲವಾರು ರಥೋತ್ಸವಗಳು ನಡೆಯುತ್ತವೆ. ಜಾತ್ರೆ, ದೀಪೋತ್ಸವಗಳು, ಸೇರಿದಂತೆ ಅನ್ನದಾನ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಇಂತಹ ಪವಿತ್ರ ಕ್ಷೇತ್ರವು ಅಭಿವೃದ್ಧಿಯಾಗದೆ ಇರುವುದು ಶೋಚನೀಯ ಸಂಗತಿ’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಮುಖಂಡರಾದ ರುದ್ರಮೂರ್ತಿ, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ಎಸ್.ಪುನೀತ್‌ಕುಮಾರ್, ಭಾರತಿ ಪ್ರಭುದೇವ್, ವಿಶ್ವನಾಥ್, ಚಂದ್ರಕಾಂತ್, ಕಲ್ಯಾಣ್‌ಕುಮಾರ್‌ಬಾಬು, ಭುಜೇಂದ್ರಪ್ಪ, ಪಿ.ಮುರಳೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.