ADVERTISEMENT

ಆನೇಕಲ್‌: ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ಸ್ವಚ್ಛತೆಯೊಂದಿಗೆ ಪ್ರತಿಭಟನೆ–ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:10 IST
Last Updated 31 ಮೇ 2025, 14:10 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು   

ಆನೇಕಲ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘವು ಕರೆ ನೀಡುವ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಅತ್ತಿಬೆಲೆ ಪುರಸಭೆ ವ್ಯಾಪ್ತಿಯ ಪೌರಕಾರ್ಮಿಕರು, ವಾಟರ್ ಮ್ಯಾನ್‌, ಕಂಪ್ಯೂಟರ್ ಆಪರೇಟರ್‌ಗಳು ಮುಷ್ಕರ ಆರಂಭಿಸಿದ್ದಾರೆ.

ಕಾರ್ಮಿಕರ ಪ್ರತಿಭಟನೆಯಿಂದಗಿ ಪುರಸಭೆಯಲ್ಲಿ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಿದವು. ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ಪುರಸಭೆಯ ವ್ಯವಸ್ಥಾಪಕ ನಂಜುಂಡಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿರು.

ಮಹಿಳೆಯರು ಸೇರಿದಂತೆ 60ಕ್ಕೂ ಹೆಚ್ಚು ಪೌರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪುರಸಭೆಯ ಸ್ವಚ್ಛತೆಗೆ ತೊಂದರೆಯಾಗದಂತೆ ಕೆಲಸಗಳನ್ನು ನಿರ್ವಹಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಪ್ರತಿಭಟನನಿರತ ಪೌರಕಾರ್ಮಿಕರು ತಿಳಿಸಿದರು.

ADVERTISEMENT

ಪಟ್ಟಣದ ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾದುದು. ಆದರೆ ಸರ್ಕಾರ ನಮ್ಮ ಶ್ರಮವನ್ನು ಗುರುತಿಸುತ್ತಿಲ್ಲ. ಐದು ವರ್ಷಗಳ ಕಾಲ ಕೆಲಸ ಮಾಡಿದ್ದರೂ ಕಾಯಂಗೊಳಿಸಿಲ್ಲ. ನ್ಯಾಯಾಲಯವು ಪೌರಕಾರ್ಮಿಕ ಹುದ್ದೆಗಳನ್ನು ಕಾಯಂ ಗೊಳಿಸುವಂತೆ ತಿಳಿಸಿದರೂ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಪೌರಕಾರ್ಮಿಕ ರಘುಪತಿ ಒತ್ತಾಯಿಸಿದರು.

ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಇದರಿಂದ ಹಗಲಿರುಳೆನದೆ ಶ್ರಮ ವಹಿಸುವ ಪೌರಕಾರ್ಮಿಕರಿಗೆ ಆರೋಗ್ಯ ಭಾಗ್ಯ ದೊರೆಯುತ್ತದೆ. ಪೌರಕಾರ್ಮಿಕರ ಕೆಲಸಗಳು ಕಾಯಂ ಆಗದ ಹಿನ್ನೆಲೆಯಲ್ಲಿ ತಿಂಗಳ ಸಂಬಳಕ್ಕೂ ಸಹ ಪರದಾಡುವಂತಾಗಿದೆ ಎಂದರು.

ಆನೇಕಲ್ ತಾಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ 32 ಮಂದಿ ಹೊರಗುತ್ತಿಗೆ ಪೌರಕಾರ್ಮಿಕರಿದ್ದು, ನಾಲ್ವರು ಹೊರಗುತ್ತಿಗೆ ವಾಟರ್ ಮ್ಯಾ, ಮೂವರು ಗಣಕ ಯಂತ್ರ ಸಹಾಯಕರು ಮತ್ದು ಒಬ್ಬ ಲೆಕ್ಕ ಪರಿಶೋಧಕರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಬೇಕು ಎಂಬುದು ಮುಷ್ಕರ ಉದ್ದೇಶ ಎಂದು ತಿಳಿಸಿದರು.

ವಾಟರ್‌ ಮ್ಯಾನ್‌ ಅಶ್ವತ್‌, ಪೌರ ಕಾರ್ಮಿಕರಾದ ಶಿವಶಂಕರ್ ಸುಬ್ರಮಣಿ ಮಾತನಾಡಿದರು.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿ ಪುರಸಭೆಯ ವ್ಯವಸ್ಥಾಪಕ ನಂಜುಂಡಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಪ್ರಮುಖ ಬೇಡಿಕೆ

* ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸಬೇಕು.

* ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು.

* ರಾಜ್ಯ ಸರ್ಕಾರಿ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ಪೌರ ಸೇವಾ ನೌಕರರಿಗೂ ಕಲ್ಪಿಸಬೇಕು

* ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಅಧಿನಿಯಮದಡಿ ಇರುವ ನೌಕರರ ಸಕ್ರಮಗೊಳಿಸಬೇಕು

* ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕ ಹೆಚ್ಚಿಸಬೇಕು

* 2022ನೇ ಸಾಲಿನ ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರಿಗೆ ಎಸ್‌ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.