ADVERTISEMENT

ಸ್ವಚ್ಛತೆಗೆ ಸ್ಥಳೀಯರ ಸಹಕಾರ ಅಗತ್ಯ 

ದೈನಂದಿನ ಕಸ ತ್ಯಾಜ್ಯ ನಿರ್ವಹಣೆ, ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 13:37 IST
Last Updated 24 ಆಗಸ್ಟ್ 2019, 13:37 IST
ಕಸ ಸಂಗ್ರಹಣೆ ಮತ್ತು ಕಸ ವಿಂಗಡಣೆ ಜಾಗೃತಿ ಜಾಥದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಕಸ ಸಂಗ್ರಹಣೆ ಮತ್ತು ಕಸ ವಿಂಗಡಣೆ ಜಾಗೃತಿ ಜಾಥದಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ದೇವನಹಳ್ಳಿ: ದೈನಂದಿನ ಕಸ ತ್ಯಾಜ್ಯ ನಿರ್ಹಹಣೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದ್ದು ನಿರ್ವಹಣೆಗೆ ಪೌರಕಾರ್ಮಿಕರೊಂದಿಗೆ ಸ್ಥಳೀಯರು ಸಹಕರಿಸಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಹೇಳಿದರು.

ಇಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ‘ಮನೆ ಮನೆ ಕಸ ಸಂಗ್ರಹ ಮತ್ತು ಕಸ ವಿಂಗಡಣೆ ಜಾಗೃತಿ ಜಾಥಾ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆಯಲ್ಲಿ ಉತ್ಪಾದನೆಯಾಗುವ ಘನ ಮತ್ತು ಒಣ ಕಸದ ತ್ಯಾಜ್ಯವನ್ನು ವಿಂಗಡಿಸಲು ಈಗಾಗಲೇ ಹಳದಿ ಮತ್ತು ಹಸಿರು ಬಣ್ಣದ ಪ್ಲಾಸ್ಟಿಕ್ ಡಬ್ಬಗಳನ್ನು ಪ್ರತಿ ಕುಟುಂಬಕ್ಕೆ ತಲುಪಿಸಲಾಗಿದೆ. ಅದರೂ ಕೆಲವರು ಅವುಗಳನ್ನು ಬಳಕೆ ಮಾಡುತ್ತಿಲ್ಲ, ಪ್ಲಾಸ್ಟಿಕ್ ಚೀಲದಲ್ಲೇ ಘನ ಮತ್ತು ಒಣ ಕಸವನ್ನು ಕಟ್ಟಿ ನಿಗದಿತ ಜಾಗದಲ್ಲಿ ಅಥವಾ ಪೌರಕಾರ್ಮಿಕರು ಮನೆ ಮನೆಗೆ ಬರುವ ವೇಳೆಯಲ್ಲಾಗಲಿ ನೀಡುತ್ತಿಲ್ಲ. ಚರಂಡಿ, ರಸ್ತೆ ಎಲ್ಲೆಂದರಲ್ಲಿ ಎಸೆಯುವುದರಿಂದ ಕಸ ಕ್ರೋಡೀಕರಿಸಿ ಘನ ಮತ್ತು ಒಣ ಕಸ ವಿಂಗಡನೆ ಮಾಡಲು ಸಿಬ್ಬಂದಿ ಕೊರತೆಯಿಂದ ಕಷ್ಟವಾಗುತ್ತಿದೆ ಎಂದು ಹೇಳಿದರು.

ADVERTISEMENT

ಪ್ರತಿನಿತ್ಯ ಹತ್ತಾರು ಟನ್ ಕಸ ಪುರಸಭೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿದೆ. ಸಾವಿರಾರು ಕೆ.ಜಿ ಕಸ ಚರಂಡಿ ಮತ್ತು ರಾಜಕಾಲುವೆಗೆ ಸುರಿದರೆ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ರಸ್ತೆ ತಗ್ಗು ಪ್ರದೇಶಗಳಲ್ಲಿ ಹರಿದು ಅವಾಂತರ ಸೃಷ್ಟಿಸುತ್ತದೆ ಎಂದರು.

ಕಾರುಗಳಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುವವರು ವಿವಿಧ ತಿಂಡಿ ತಿನಿಸು ತಿಂದು ಸಂಚರಿಸುವ ವಾಹನಗಳ ಕಿಟಕಿಯಿಂದ ಬಿಸಾಡುತ್ತಾರೆ. ಅಂತಹ ಸಂದರ್ಭದಲ್ಲಿ ಹಿಂಬದಿ ಸವಾರರ ಮೇಲೆ ಬೀಳುತ್ತದೆ. ಇಂತಹ ಅಸಹ್ಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು.

ಸ್ಥಳೀಯವಾಗಿರುವ ಕುಟುಂಬಗಳು ಮನೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಂದಕ್ಕೂ ಪೌರಕಾರ್ಮಿಕರನ್ನು ದೂಷಿಸುವುದು ಸರಿಯಲ್ಲ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.

ಎಂಜಿನಿಯರ್ ಗಿರಿಜಾ ಮಾತನಾಡಿ, ‘ತ್ಯಾಜ್ಯ ನಿರ್ವಹಣೆ ಮತ್ತು ಕಲುಷಿತ ವಾತಾವರಣ ಸಮಸ್ಯೆ ಈ ಹಿಂದೆ ನಗರ ಪ್ರದೇಶಗಳಲ್ಲಿ
ಕಾಣುತ್ತಿದ್ದೆವು. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಮಾತ್ರ ನಮ್ಮ ಆರೋಗ್ಯ ಸುಧಾರಣೆ ಕಂಡುಕೊಳ್ಳಲು ಸಾಧ್ಯ. ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಆನೇಕ ಮಾರಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ’ ಎಂದು ಹೇಳಿದರು.

ಪುರಸಭೆ ಸದಸ್ಯರಾದ ಬಾಂಬೆ ನಾರಾಯಣಸ್ವಾಮಿ, ಲಕ್ಷ್ಮಿನಾರಾಯಣ, ಕೋಡಿ ಮಂಚೇನಹಳ್ಳಿ ನಾಗೇಶ್, ಲೀಲಾವತಿ ಶಿವಕುಮಾರ್, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಬಿ.ಜಿ ಸುಲೋಚನಾ, ಕಿರಿಯ ಆರೋಗ್ಯ ನಿರೀಕ್ಷಕಿ ತೃಪ್ತಿ, ಪರಿಸರ ಎಂಜಿನಿಯರ್ ನೇತ್ರಾವತಿ, ಸಿ.ಡಿ.ಸಿ. ಘಟಕ ಸದಸ್ಯರಾದ ರಮೇಶ್ ಕುಮಾರ್, ಆಶ್ವಿನ್, ಯೋಗೀಶ್, ತಮಯ್, ಗಗನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.