ಹೊಸಕೋಟೆ: ರಾಜ್ಯದಲ್ಲಿ ಗಂಭೀರವಾದ ಬರಗಾಲ ಆವರಿಸಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಮರೋಪಾದಿಯಲ್ಲಿ ಹೆಚ್ಚಿನ ಪರಿಹಾರ ಕಾರ್ಯಗಳನ್ನು ತಕ್ಷಣವೇ ಮಾಡಲು ಸರ್ಕಾರ ಮುಂದಾಗಬೇಕು ಎಂದು ಸಿಪಿಎಂ ಜಿಲ್ಲಾ ಮುಖಂಡ ಮೋಹನ್‌ಬಾಬು ಒತ್ತಾಯಿಸಿದರು.
ತಾಲ್ಲೂಕಿನ ನಂದಗುಡಿ ಹೋಬಳಿ ಕೇಂದ್ರದ ನಾಡಕಚೇರಿಯ ಬಳಿ ಬರ ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆಯ ವಿರುದ್ಧ ಸಿಪಿಎಂ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರತಿ ಎಕರೆಗೆ ₹25ಸಾವಿರ ಬೆಳೆ ಪರಿಹಾರ, ಕುಡಿಯುವ ನೀರಿನ ವ್ಯವಸ್ಥೆ, ಆಹಾರದ ವ್ಯವಸ್ಥೆ, ನರೇಗಾ ಕೂಲಿ ಹೆಚ್ಚಳ ಮಾಡಬೇಕು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಈ ಕೂಡಲೆ ಈಡೇರಿಸಬೇಕು. ತಾಲ್ಲೂಕಿನಲ್ಲಿರುವ ಬರದ ಕುರಿತು ಕೇಂದ್ರ ಸರ್ಕಾರದ ತಂಡವೂ ಬಂದು ಪರಿಶೀಲಿಸಿ ಮಾಹಿತಿಯನ್ನು ದಾಖಲಿಸಿದೆ. ಆದರೆ ವರದಿ ಆಧರಿಸಿ ಯಾವುದೇ ಪರಿಹಾರ ಕಾರ್ಯ ಈವರೆಗೂ ಕೈಗೊಳ್ಳದಿರುವುದು ಜನರು ಮತ್ತಷ್ಟು ಸಂಕಷ್ಟಕ್ಕೆ ಈಡಾಗುವಂತಾಗಿದೆ ಎಂದರು.
ಬೇಸಿಗೆಯ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ರೈತರ ಬೆಳೆಗಳ ಬೆಲೆಯೂ ಕಡಿಮೆಯಾಗುತ್ತಿದೆ. ಜನರಿಗೆ ಅಗತ್ಯವಾದ ಅಕ್ಕಿ ಮತ್ತಿತರೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಿ. ಅಲ್ಲದೆ ಜನರ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದ್ದೇ ಆದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಉತ್ತರವನ್ನು ಜನರು ಮತದಾನದ ಮೂಲಕ ತೋರಿಸುತ್ತಾರೆ ಎಂದರು.
ನಂದಗುಡಿ ಹೋಬಳಿಯ ಕಂದಾಯ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಎಂ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.