ADVERTISEMENT

ದೇವನಹಳ್ಳಿ: ಅಡುಗೆ ಕೆಲಸಗಾರರಿಗೆ ಪರಿಹಾರ ಕೊಡಿ- ಕಾರ್ಮಿಕರ ಪ್ರತಿಭಟನೆ

ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 2:21 IST
Last Updated 23 ಸೆಪ್ಟೆಂಬರ್ 2020, 2:21 IST
ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕಗೆ ಮನವಿ ಸಲ್ಲಿಸಿದ ಯುನಿಯನ್ ಕಾರ್ಯಕರ್ತರು
ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕಗೆ ಮನವಿ ಸಲ್ಲಿಸಿದ ಯುನಿಯನ್ ಕಾರ್ಯಕರ್ತರು   

ದೇವನಹಳ್ಳಿ: ಅಡುಗೆ ಕೆಲಸಗಾರರು ಮತ್ತು ಸಹಾಯಕ ಕಾರ್ಮಿಕರ ಸಮಸ್ಯೆಗಳಿಗೆ ಕೂಡಲೇ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆಅಡುಗೆ ಕೆಲಸಗಾರರು ಮತ್ತು ಸಹಾಯಕರು ಪ್ರತಿಭಟನೆ ನಡೆಸಿದರು.

ಅಡುಗೆ ಕಾರ್ಮಿಕರ ಯೂನಿಯನ್‌ ಸಂಸ್ಥಾಪಕ ಅಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ‘2020ರ ಮಾರ್ಚ್‌ನಿಂದ ಯಾವುದೇ ಮದುವೆ, ಶುಭ ಸಮಾರಂಭಗಳು ನಡೆಯುತ್ತಿಲ್ಲ. ಕೊರೊನಾ ಸೋಂಕಿನ ಪರಿಣಾಮ ಸರ್ಕಾರ ಯಾವುದೇ ಸಮಾರಂಭಕ್ಕೆ 50 ಜನರಿಗೆ ಸೀಮಿತಗೊಳಿಸಿದೆ. ಅಡುಗೆಯವರು ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ದುಃಸ್ಥಿತಿ ಇದೆ. ಮಕ್ಕಳ ವಿದ್ಯಾಭಾಸ, ಕುಟುಂಬಗಳ ನಿರ್ವಹಣೆಗೆ ಕೈಯಲ್ಲಿ ಬಿಡಿಗಾಸು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸರ್ಕಾರ ವಿವಿಧ ಸಮುದಾಯಗಳ ವೃತ್ತಿ ನಿರತರಿಗೆ ನೀಡಿರುವ ಕನಿಷ್ಠ ₹ 5 ಸಾವಿರ ಪರಿಹಾರ ನಮಗೂ ನೀಡಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿ 10 ಲಕ್ಷ ಅಡುಗೆ ಕೆಲಸಗಾರರು ಮತ್ತು ಆವರಿಗೆ ಸಹಾಯಕರು ಇದ್ದಾರೆ. ಇದೇ ಮೊದಲ ಬಾರಿಗೆ ನಮಗೆ ಸಂಕಷ್ಟ ಎದುರಾಗಿದೆ. ಸರ್ಕಾರ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೆರವು ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಯೂನಿಯನ್ ಜಿಲ್ಲಾ ಘಟಕ ಅಧ್ಯಕ್ಷ ವೈ.ಜಿ.ಮುರಳೀಧರ ಮಾತನಾಡಿ, ‘ಅಡುಗೆ ಕೆಲಸಗಾರರಿಗೆ ಮತ್ತು ಸಹಾಯಕರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಗುರುತಿಸ ಚೀಟಿ ನೀಡುವಂತೆ ಸರ್ಕಾರ 2019 ಜೂನ್‍ನಲ್ಲಿ ಆದೇಶ ನೀಡಿದೆ. ಈವರೆಗೂ ನೀಡಿಲ್ಲ. ಶ್ರಮಸನ್ಮಾನ ಯೋಜನೆಯಡಿ ವಸತಿ ನೀಡಬೇಕು. ಪಿಂಚಣಿ ಯೋಜನೆಯಲ್ಲಿ 40 ವರ್ಷದ ನಂತರ ಅರ್ಹರಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು ಮಾತನಾಡಿ, ‘ಪಾಕಶಾಸ್ತ್ರದಲ್ಲಿ ಪದವಿ ಪಡೆದು ಪಂಚತಾರಾ ಮತ್ತು ಕಾರ್ಪೊರೇಟ್‌ ಕಂಪನಿಗಳಲ್ಲಿರುವ ಅಡುಗೆ ಕಾರ್ಮಿಕರು ಒಂದೆಡೆಯಾದರೆ, ಕುಟುಂಬದ ಪೊಷಣೆಗೆ ರಸ್ತೆ ಬದಿ ಪಾನಿಪುರಿ, ಗೋಬಿ ಮಂಜೂರಿ, ಅನ್ನ ಸಾಂಬಾರ್‌ ಮಾರಾಟ ಮಾಡಿ ಬದಕು ಕಟ್ಟಿಕೊಳ್ಳುವ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ. 13 ವರ್ಷಗಳಿಂದ ಅನೇಕ ಬಾರಿ ಹೋರಾಟ ನಡೆಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿರ್ವಾಯತೆ ಇದೆ ಎಂದು ದೂರಿದರು.

ಯೂನಿಯನ್ ಗೌರವಾಧ್ಯಕ್ಷ ಸುರೇಶ್ ಕುಮಾರ್, ಜಿಲ್ಲಾ ಘಟಕ ಉಪಾಧ್ಯಕ್ಷ ಜಯರಾಮ್, ಮುಖಂಡರಾದ ನಾಗರಾಜ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.