ADVERTISEMENT

‘ಶ್ರದ್ಧಾಂಜಲಿ’ ಫ್ಲೆಕ್ಸ್‌ಗಳ ಹಾವಳಿ: ಜನರ ಆತಂಕ

ದೊಡ್ಡಬಳ್ಳಾಪುರ: ವೃತ್ತ, ರಸ್ತೆಗಳಲ್ಲಿ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:50 IST
Last Updated 20 ಅಕ್ಟೋಬರ್ 2020, 2:50 IST
ದೊಡ್ಡಬಳ್ಳಾಪುರದ ಗ್ರಾಮವೊಂದರ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಸಾಲಾಗಿ ಕಟ್ಟಲಾಗಿರುವ ಭಾವಪೂರ್ಣ ಶ್ರದ್ಧಾಂಜಲಿಯ ಫ್ಲೆಕ್ಸ್‌ಗಳು
ದೊಡ್ಡಬಳ್ಳಾಪುರದ ಗ್ರಾಮವೊಂದರ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಸಾಲಾಗಿ ಕಟ್ಟಲಾಗಿರುವ ಭಾವಪೂರ್ಣ ಶ್ರದ್ಧಾಂಜಲಿಯ ಫ್ಲೆಕ್ಸ್‌ಗಳು   

ದೊಡ್ಡಬಳ್ಳಾಪುರ: ನಗರದ ಪ್ರಮುಖ ವೃತ್ತಗಳು, ತಾಲ್ಲೂಕಿನ ಹೋಬಳಿ ಕೇಂದ್ರಗಳಿಂದ ಮೊದಲುಗೊಂಡು ದೊಡ್ಡ ದೊಡ್ಡ ಗ್ರಾಮಗಳ ಸಮೀಪದ ವೃತ್ತಗಳು, ರಸ್ತೆಬದಿಯಲ್ಲಿನ ವಿದ್ಯುತ್ ಕಂಬಗಳು, ಮರಗಳಲ್ಲಿ ‘ಭಾವಪೂರ್ಣ ಶ್ರದ್ಧಾಂಜಲಿ’ ಫ್ಲೆಕ್ಸ್‌ಗಳ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆ, ತಾಲ್ಲೂಕು ಆಡಳಿತದಿಂದ ಪ್ರತಿದಿನ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದ ಕೋವಿಡ್‌-19 ಅಂಕಿಅಂಶಗಳ ಹೆಲ್ತ್‌ ಬುಲೆಟಿನ್‌ನಲ್ಲಿ ಅ.7ರಿಂದ ಈಚೆಗೆ ಮೃತರ ಸಂಖ್ಯೆ ಕಣ್ಮರೆಯಾಗಿದೆ. ಅ.7ರ ಅಂಕಿಅಂಶದಂತೆ ತಾಲ್ಲೂಕಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 93 ಆಗಿತ್ತು. ತಾಲ್ಲೂಕು ಆಡಳಿತ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ ಪ್ರಕಾರ 23 ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 3,540. ಈ ಪೈಕಿ 2,901 ಜನ ಗುಣಮುಖರಾಗಿದ್ದಾರೆ. ಅ.7ರಿಂದ ಮೃತರ ಸಂಖ್ಯೆ ನೀಡಿಲ್ಲವಾದರೂ ಗುಣಮುಖರಾಗಿರುವ ಹಾಗೂ ಸೋಂಕು ದೃಢಪಟ್ಟಿರುವ ಅಂಕಿಅಂಶ ಸೂಕ್ಷ್ಮವಾಗಿ ಗಮನಿಸಿದರೆ ಮೃತರ ಸಂಖ್ಯೆ ಸುಮಾರು 130ಕ್ಕೆ ಏರಿಕೆಯಾಗಿರುವುದು ಕಂಡುಬರುತ್ತಿದೆ.

ಸೋಂಕು ತೀವ್ರಗೊಂಡ ಪರಿಣಾಮ ತಾಲ್ಲೂಕಿನ ಕಾಡನೂರು, ಮರಳೇನಹಳ್ಳಿ, ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡು 48 ಗಂಟೆಗಳ ಕಾಲ ಆರೋಗ್ಯ ಕೇಂದ್ರಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಈಗ ಮತ್ತೆ ತೆರೆಯಲಾಗಿದೆ.

ADVERTISEMENT

ಟೀ, ಕಾಫಿ ಬದಲಿಗೆ ಕಷಾಯ: ಕೊರೊನಾ ವೈರಸ್‌ ಸೋಂಕು ತಡೆಗೆ ಬಿಸಿ ಬಿಸಿ ಕಷಾಯ ಸೇವನೆ ಒಳ್ಳೆಯದು ಎನ್ನುವುದು ಹೆಚ್ಚು ಪ್ರಚಾರವಾಗಿದೆ. ಹೀಗಾಗಿ ನಗರ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ಹೋಟೆಲ್‌ಗಳಲ್ಲಿ ಟೀ, ಕಾಫಿಗಿಂತಲೂ ವಿವಿಧ ಮಾದರಿಗಳ ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ.

ನೀತಿಸಂಹಿತೆ ಅಡ್ಡಿ:ಮೃತಪಟ್ಟವರ ಭಾವಚಿತ್ರಗಳನ್ನು ಒಳಗೊಂಡ ಫ್ಲೆಕ್ಸ್‌
ಗಳನ್ನು ಹಾಕುವುದಕ್ಕೆ ಈಗ ವಿಧಾನ ಪರಿಷತ್‌ ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿದೆ. ನಗರ ವ್ಯಾಪ್ತಿ ಸೇರಿದಂತೆ ಎಲ್ಲೂ ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ. ಫ್ಲೆಕ್ಸ್‌ಗಳನ್ನು ಹಾಕಿದರೆ ಸ್ಥಳೀಯ ಸಂಸ್ಥೆಗಳು ತೆರವುಗೊಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.