ADVERTISEMENT

‘ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವ ಭರವಸೆ’

ಪಂಚ ರಾಜ್ಯಗಳ ಫಲಿತಾಂಶಕ್ಕೆ ಸಂತಸ *ಮಾರ್ಚ್‌ ನಂತರ ಲೋಕಸಭಾ ಚುನಾವಣೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 12:46 IST
Last Updated 15 ಡಿಸೆಂಬರ್ 2018, 12:46 IST
ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿದರು
ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬೈರೇಗೌಡ ಮಾತನಾಡಿದರು   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ):ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಿಜೆಪಿ ಕನಸು ಭಗ್ನವಾಗಿದೆ. ಪಂಚ ರಾಜ್ಯಗಳ ಫಲಿತಾಂಶ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವ ಆಶಾಭಾವನೆ ಮೂಡಿಸಿದೆ ಎಂದು ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬೈರೇಗೌಡ ಹೇಳಿದರು.

ಅವರು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಮಟ್ಟದ ಕಾಂಗ್ರೆಸ್ ಸಮಿತಿ ಮುಖಂಡರ ಸಭೆಯಲ್ಲಿ ಶನಿವಾರ ಮಾತನಾಡಿದರು.

ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತರು ಸಹ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಂದ ಜಿಲ್ಲಾ ಮಟ್ಟದ ಅಧ್ಯಕ್ಷರವರೆಗೂ ಸಂಪರ್ಕ ಹೊಂದಲು ‘ಶಕ್ತಿ’ ಆಂದೋಲನವು ಕಾರ್ಯಕರ್ತರ ಧ್ವನಿ, ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪ್ರತಿ ಬೂತ್ ಮಟ್ಟದಲ್ಲೂ ಸದಸ್ಯರ ನೋಂದಣಿ ನಡೆಯಲಿದೆ. ನೋಂದಣಿಯಾಗಿರುವ ಸದಸ್ಯರಿಗೆ ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆಯಲಿದೆ. ಈ ಹಿಂದೆ ಪಕ್ಷದ ಸಂಘಟನೆಗಾಗಿ ಸೂಚಿಸಲಾಗಿದ್ದ ‘ಮನೆ ಮನೆಗೆ ಕಾಂಗ್ರೆಸ್’ ಸೇರಿದಂತೆ ಎಲ್ಲ ರೀತಿಯ ಕಾರ್ಯಚಟುವಟಿಕೆಗಳ ಮೂಲಕ ಸಂಘಟನೆ ಮಾಡಲಾಗಿದೆ ಎಂದರು.

2019ರ ಮಾರ್ಚ್ ನಂತರ ಯಾವುದೇ ಸಂದರ್ಭದಲ್ಲಾದರೂ ಲೋಕಸಭಾ ಚುನಾವಣೆ ಘೋಷಣೆಯಾಗಬಹುದು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂ.ವೀರಪ್ಪಮೊಯಿಲಿ ಅವರು ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಪಕ್ಷದ ಮುಖಂಡರು ಈಗಿನಿಂದಲೇ ಸಂಘಟನೆಗೆ ಸಜ್ಜಾಗಬೇಕು. ಕ್ಷೇತ್ರದಲ್ಲಿ ಐದು ವರ್ಷಗಳಿಂದ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾಡಿಸಿರುವ ಅಭಿವೃದ್ಧಿ ಕೆಲಸಗಳು ಹಾಗೂ ಸಂಸತ್ ಸದಸ್ಯರ ನಿಧಿಯಲ್ಲಿ ಆಗಿರುವ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಟಿಎಪಿಎಂಸಿಎಸ್ ನಿರ್ದೇಶಕ ಎಂ.ಗೋವಿಂದರಾಜ್ ಮಾತನಾಡಿ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಆಗುವುದು ನಿಜವಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಕೆಲಸ ನಡೆಸಬೇಕು ಎಂದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಮತದಾರರು ಹೊಂದಿದ್ದ ವಿಶ್ವಾಸ ಕಳೆದುಕೊಂಡಿದ್ದಾರೆ. ಬರೀ ಮಾತಿನಲ್ಲಿಯೇ ಮತದಾರರನ್ನು ನಂಬಿಸಲು ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಸದಸ್ಯೆ ಕನ್ಯಾಕುಮಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್, ಶಿವಮ್ಮ, ಯಶೋಧಮ್ಮ, ಮಂಜುನಾಥ್, ಕಸಬಾ ಹೋಬಳಿ ಬ್ಲಾಕ್ ಸಮಿತಿ ಅಧ್ಯಕ್ಷೆ ವೆಂಕಟೇಶ್, ಅಪ್ಪಕಾರನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಟಿ.ರಾಮಣ್ಣ, ಶಕ್ತಿ ಸದಸ್ಯತ್ವ ನೋಂದಣಿ ಅಭಿಯಾನ ತಾಲ್ಲೂಕು ಸಂಚಾಲಕ ಬಸವರಾಜ, ಕಿಸಾನ್ ಸಮಿತಿ ಜಿಲ್ಲಾ ಅಧ್ಯಕ್ಷ ವೆಂಕಟರಾಂ, ಪಕ್ಷದ ಹಿರಿಯ ಮುಖಂಡರಾದ ರಾಮಕೃಷ್ಣಯ್ಯ, ಡಿ.ಜಿ.ರಾಜಗೋಪಾಲ್, ರಾಜ್ ಕುಮಾರ್, ನರಸಮ್ಮ, ಸ್ವಾಮಿ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಕಿರಣ್ ವಿ.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.