ADVERTISEMENT

ಸಂವಿಧಾನ ದಿನ | ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೈರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:58 IST
Last Updated 27 ನವೆಂಬರ್ 2025, 4:58 IST
ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಿಧಾನ ದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ.ಬಸವರಾಜ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್‌. ಅನುರಾಧ ಸೇರಿ ದಲಿತ ಮುಖಂಡರು, ಅಧಿಕಾರಿಗಳು ಸಂವಿಧಾನ ಪೀಠಿಕೆಗೆ ಪುಪ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು
ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಿಧಾನ ದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ.ಬಸವರಾಜ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್‌. ಅನುರಾಧ ಸೇರಿ ದಲಿತ ಮುಖಂಡರು, ಅಧಿಕಾರಿಗಳು ಸಂವಿಧಾನ ಪೀಠಿಕೆಗೆ ಪುಪ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು   

ದೇವನಹಳ್ಳಿ: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಜಿಲ್ಲಾ ಮಟ್ಟದ ಸಂವಿಧಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ, ಸಂವಿಧಾನ ಪ್ರಸ್ತಾವನೆ ಬೋಧಿಸಿದರು. 

ಬಳಿಕ ಮಾತನಾಡಿದ ಅವರು, ‘ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನವನ್ನು ಸಂವಿಧಾನ ದಿನವಾಗಿ ಆಚರಿಸುತ್ತಿರುವುದು ಸಂತಸದ ವಿಷಯ. ಸಂವಿಧಾನದ ಆಶಯದಂತೆ ನಾವೆಲ್ಲರೂ ಸಮಾಜದಲ್ಲಿ ಸಮಾನತೆಯಿಂದ ಬಾಳುತ್ತಿದ್ದೇವೆ’ ಎಂದು ಹೇಳಿದರು. 

ADVERTISEMENT

‘ನಮ್ಮದು ಲಿಖಿತ ಸಂವಿಧಾನ. ಅಂಬೇಡ್ಕರ್ ಹಾಗೂ ಇತರ ಮಹಾನ್ ಚೇತನರ ನೆರವಿನಿಂದಾಗಿ ಸುದೀರ್ಘ ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಸತತ ಯತ್ನದಿಂದಾಗಿ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು ಹೊಂದಿರುವ ಪ್ರಪಂಚದ ಅತಿದೊಡ್ಡ ಸಂವಿಧಾನವನ್ನು 1949ರ ನವೆಂಬರ್ 26ರಂದು ಸಮರ್ಥಿಸಿಕೊಳ್ಳಲಾಯಿತು’ ಎಂದರು. 

ಪ್ರಸ್ತುತ ಸಂವಿಧಾನದಲ್ಲಿ 467 ವಿಧಿಗಳು, 25 ಭಾಗಗಳು, 12 ಅನುಸೂಚಿಗಳಿವೆ. ಇದರಿಂದ ನಾವೆಲ್ಲರೂ ನಮಗೆ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಸ್ವತಂತ್ರವಾಗಿ ಮಾತನಾಡುತ್ತಿದ್ದೇವೆ. ಸಂವಿಧಾನ ರಚಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಹಾಗೂ ಅವರ ಜೊತೆ ಇದ್ದ ಮಹಾನ್ ವ್ಯಕ್ತಿಗಳು ರಾಷ್ಟ್ರದ ಸದೃಢತೆಗಾಗಿ ಸಂವಿಧಾನವನ್ನು ಬರೆದರು ಎಂದರು. 

‘ನಮ್ಮ ಸಂವಿಧಾನಕ್ಕೆ ಗೌರವ ನೀಡಬೇಕು. ಯಾವುದೇ ಕಾರಣಕ್ಕೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಅಂಗವು ಸಂವಿಧಾನದಿಂದ ನಮಗೆ ದೊರೆತಿದೆ. ಅವುಗಳು ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತವೆ. ಇದರಲ್ಲಿ ಬರುವ ಎಲ್ಲ ತತ್ವಗಳನ್ನು ನಾವು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ರಾಜ್ಯಶಾಸ್ತ್ರದ ಉಪನ್ಯಾಸಕಿ ಡಾ.ಮಂಜುಳ ವಿಶೇಷ ಉಪನ್ಯಾಸ ನೀಡಿದರು.

ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿಗಾಗಿ ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ, ಇತರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್. ಅನುರಾಧ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ, ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತ ಹರ್ಷ, ತಹಶೀಲ್ದಾರ್ ಅನಿಲ್ ಎಂ, ಬಿ. ರಾಜಣ್ಣ, ಕಾರಹಳ್ಳಿ ಶ್ರೀನಿವಾಸ್, ವೆಂಕಟೇಶ್, ಬುಳ್ಳಳ್ಳಿ ರಾಜಪ್ಪ, ರವಿಕಲಾ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂವಿಧಾನ ಜಾಗೃತಿ ಜಾಥಾ
ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ದೇವನಹಳ್ಳಿ ತಾಲ್ಲೂಕು ತಹಶೀಲ್ದಾ‌ರ್ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ತಹಶೀಲ್ದಾರ್ ಕಚೇರಿ ಆವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸಂವಿಧಾನ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡರು. 

ಜಿಲ್ಲಾಡಳಿತದ ವಿರುದ್ಧ ದಲಿತರ ಆಕ್ರೋಶ

ಸಂವಿಧಾನ ಸಮರ್ಪಣಾ ದಿನವನ್ನು ಜಿಲ್ಲಾಡಳಿತ ಅಚ್ಟುಕಟ್ಟಾಗಿ ಆಯೋಜನೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಹೊರತಾಗಿಯೂ ಅವರು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.  ಜಿಲ್ಲಾ ಉಸ್ತುವಾರಿ ಸಚಿವರೇ ಇಂಥ ಮಹತ್ವದ ಕಾರ್ಯಕ್ರಮಕ್ಕೆ ಗೈರಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.  ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ದೋರಣೆ ಸಹಿಸುವುದಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿರುವ ಹಲವಾರು ಸಂಘಟನೆಗಳ ಮುಖಂಡರಿಗೆ ಭಾಷಣ ಮಾಡಲು ಅವಕಾಶ ನೀಡಿಲ್ಲ. ಪೂರ್ವಭಾವಿಯಾಗಿ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿಲ್ಲ ಎಂದು ಆರೋಪಿಸಿ ಬುಳ್ಳಹಳ್ಳಿ ರಾಜಪ್ಪ ಕಾರಹಳ್ಳಿ ಶ್ರೀನಿವಾಸ್‌ ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.