ADVERTISEMENT

ಸಂವಿಧಾನ ಒಂದು ಸಮುದಾಯಕ್ಕೆ ಸೀಮಿತವಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

ದೇವನಹಳ್ಳಿ: ಅಂಬೇಡ್ಕರ್‌ ಜಯಂತಿಯಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:40 IST
Last Updated 14 ಏಪ್ರಿಲ್ 2025, 13:40 IST
ದೇವನಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿಯಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ದೇವನಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿಯಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ದೇವನಹಳ್ಳಿ: ‘ಅಂಬೇಡ್ಕರ್ ಅವರ ತತ್ವಾದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 118 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಕೇವಲ ಒಂದು ಜಾತಿ, ಸಮುದಾಯ ಮತ್ತು ವರ್ಗಕ್ಕೆ ಸೀಮಿತವಲ್ಲ. ಭಾರತದ ಕಟ್ಟು ಕಡೆಯ ಪ್ರಜೆಗೂ ಸಮಾನ ಅವಕಾಶವನ್ನು ಸಂವಿಧಾನ ಕಲ್ಪಿಸುತ್ತದೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನ ವೃದ್ಧಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ ಎಂದು ತಿಳಿಸಿದರು.

ADVERTISEMENT

ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಇಬ್ಬರೂ ಅಸ್ಪೃಶ್ಯತೆ ತೊಲಗಿಸಿ ಸಮ ಸಮಾಜನಿರ್ಮಾಣಕ್ಕೆ ಸಾಕಷ್ಟು ಹೋರಾಟವನ್ನು ರೂಪಿಸಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಸಂಸದ ಡಾ.ಕೆ ಸುಧಾಕರ್ ಮಾತನಾಡಿ, ಇಂದು ಪ್ರಪಂಚದೆಲ್ಲೆಡೆ ಅಂಬೇಡ್ಕರ್ ಜಯಂತಿಯನ್ನು ‘ವಿಶ್ವಜ್ಞಾನಿ’ ದಿನವಾಗಿ ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಇವತ್ತು ಇಬ್ಬರು ಮಹಾನ್ ನಾಯಕರ ಜನುಮದಿನ ಜೊತೆಗೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ತತ್ವಗಳನ್ನು ಆಚರಣೆ ಮಾಡುವ ದಿನ ಎಂದು ಹೇಳಿದರು.

ಅಂಬೇಡ್ಕರ್ ಅವರ ಜೀವನ ಬಹಳ ಕಠಿಣವಾಗಿತ್ತು. ಜಾತಿ ಪದ್ಧತಿ, ಶೋಷಣೆ ನೋವು ಸಹಿಸಿಕೊಂಡು ದೇಶಕ್ಕೆ ಉತ್ತಮ ಸಂವಿಧಾನ ರಚಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದ ಮೊದಲ ಭಾರತೀಯ ಸಾಲಿನಲ್ಲಿದ್ದಾರೆ ಎಂದು ಸ್ಮರಿದರು.

ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಹರಿಕಾರ. ಇವರಿಬ್ಬರ ಜೀವನಶೈಲಿ, ತತ್ವಾದರ್ಶಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪುರಸಭೆ ಅಧ್ಯಕ್ಷ ಮುನಿಕೃಷ್ಣ, ತಹಶೀಲ್ದಾರ್ ಬಾಲಕೃಷ್ಣ, ತಾಲ್ಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ನಾರಾಯಣಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಉಪಸ್ಥಿತರಿದ್ದರು.

ಪಂಚಾಯಿತಿವಾರು ವಸತಿ ಶಾಲೆ ನಿರ್ಮಾಣ

ರಾಜ್ಯದಾದ್ಯಂತ ಹೋಬಳಿವಾರು ವಸತಿ ಶಾಲೆ ಸ್ಥಾಪಿಸಲು 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಲಾಗಿತ್ತು. ಈಗ ವಸತಿ ಶಾಲೆಗಳಿಂದ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ. ಮುಂದೆ ಪಂಚಾಯಿತಿವಾರು ವಸತಿ ಶಾಲೆ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.