ADVERTISEMENT

ದೌರ್ಜನ್ಯ ಪ್ರತಿಬಂಧ ಕಾನೂನು ಬಗ್ಗೆ ಅರಿವು ಮೂಡಿಸಿ: ಡಿಸಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:40 IST
Last Updated 20 ಸೆಪ್ಟೆಂಬರ್ 2019, 12:40 IST
ಜಿಲ್ಲಾ ಮಟ್ಟದ ಜಾಗೃತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಇದ್ದರು.
ಜಿಲ್ಲಾ ಮಟ್ಟದ ಜಾಗೃತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಇದ್ದರು.   

ದೇವನಹಳ್ಳಿ: ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಕಾನೂನುಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರತಿಬಂಧ ನಿಯಮಗಳು 1995ರ ನಿಯಮ 17ರ ಅನ್ವಯ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಸಂಬಂಧಿಸಿದ ಪರಿಹಾರ ಪ್ರಕ್ರಿಯೆಯ ಮಾಹಿತಿ ಪಡೆದರು.

ADVERTISEMENT

‘ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಕಾನೂನಿನ ನಿಯಮಾನುಸಾರ ಸಹಾಯಧನ ನೀಡುವುದು, ಅನುಕಂಪದ ಆಧಾರದ ಮೇರೆಗೆ ಸರ್ಕಾರಿ ಉದ್ಯೋಗ ನೀಡುವುದು, ಬಿಪಿಎಲ್ ಪಡಿತರ ಚೀಟಿ, ಆಯುಷ್ಮಾನ್ ಕಾರ್ಡ್, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಸರ್ಕಾರಿ ಜಮೀನು ಅವಲಂಬಿತ ಬುಡಕಟ್ಟು ರೈತ ವರ್ಗಕ್ಕೆ ಉಚಿತ ನಿವೇಶನ ನೀಡುವಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ’ ಎಂದರು.

‘ಸಕಾಲದ ಮೂಲಕ ದಾಖಲಾಗುವ ದೌರ್ಜನ್ಯ ಪ್ರಕರಣಗಳನ್ನು ಏಳು ದಿನಗಳ ಒಳಗಾಗಿ ಪರಿಶೀಲಿಸಿ, ಪರಿಹಾರ ನೀಡಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹನುಮಂತರಾಯಪ್ಪ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಕೆ. ನಾಯಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್.ವಿ.ಜೆ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭವ್ಯಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೀತಿ, ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.