ADVERTISEMENT

ದೊಡ್ಡಬಳ್ಳಾಪುರ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ

ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ದೇವರಾಜು ಅವರಿಂದ ದೂರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 1:38 IST
Last Updated 4 ನವೆಂಬರ್ 2020, 1:38 IST

ದೊಡ್ಡಬಳ್ಳಾಪುರ: ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ದೇವರಾಜು ಅವರು ದೂರು ದಾಖಲಿಸಿದ್ದಾರೆ.

ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಉಪನೋಂದಣಾಧಿಕಾರಿ ನೀಡಿರುವ ದೂರಿನಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಜಾಲದ ಕಾಡಿಗಾನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಬಚ್ಚಹಳ್ಳಿ, ಅರಳುಮಲ್ಲಿಗೆ ಕುಕ್ಕನಹಳ್ಳಿ ಗ್ರಾಮದಲ್ಲಿ ಏಳು ಎಕರೆ ಜಮೀನಿಗೆ ನಕಲಿ ಪತ್ರಗಳನ್ನು ಸೃಷ್ಟಿಯಾಗಿರುವ ಬಗ್ಗೆ ಮಾಹಿತಿ ಇದೆ.

ಭೂಮಿ ಖರೀದಿದಾರರಲ್ಲಿ ತಲ್ಲಣ: ಉಪನೊಂದಣಾಧಿಕಾರಿಗಳಿಂದ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ತಾಲ್ಲೂಕಿನಲ್ಲಿ ಜಮೀನು ಖರೀದಿಸಿರುವವರು ತಮ್ಮ ಜಮೀನಿನ ದಾಖಲೆಗಳ ನೈಜತೆ ಬಗ್ಗೆ ಅನುಮಾನ ಪಡುವಂತಾಗಿದೆ.

ADVERTISEMENT

ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರಿಗೆ ಸಮೀಪ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಬಹುತೇಕ ಜನ ಉದ್ಯಮಿಗಳು ಸೇರಿದಂತೆ ವಿವಿಧ ವಲಯದಲ್ಲಿ ಹಣ ಉಳಿತಾಯ ಮಾಡಿರುವ ಬಹುತೇಕ ಮಂದಿ ಜಮೀನು ಖರೀದಿಸಿದ್ದಾರೆ. ಈಗಷ್ಟೇ ಈ ಪ್ರಕರಣ ಬೆಳಕಿಗೆ ಬಂದಿರುವುದರಿಂದ ಜಮೀನಿನ ದಾಖಲೆಗಳ ನೈಜತೆ ಕುರಿತಂತೆ ಪರಿಶೀಲಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಬರತೊಡಗಿದ್ದಾರೆ.

ಸರ್ಕಾರದ ವಿಳಂಬ ನೀತಿ ಕಾರಣ: ತಾಲ್ಲೂಕು ಕಚೇರಿಯಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಶತಮಾನಗಳಷ್ಟು ಹಳೆಯ ವರ್ಷಗಳ ಎಲ್ಲ ರೀತಿ ದಾಖಲೆ ಡಿಜಿಟಲೀಕರಣಗೊಳಿಸಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ದೃ‍ಷ್ಟಿಯಿಂದ ಸ್ಕ್ಯಾನ್‌ ಮಾಡಲಾಗಿತ್ತು. ಆದರೆ, ಇಲ್ಲಿವರೆಗೂ ಈ ದಾಖಲೆಗಳು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡದೆ ಇರುವ ಸರ್ಕಾರದ ವಿಳಂಬ ನೀತಿಯೇ ಭೂ ದಾಖಲೆಗಳಲ್ಲಿ ಅಕ್ರಮವಾಗಲು ಕಾರಣವಾಗಿದೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಭೂಮಿ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇವೆ.

ಅಲ್ಲದೆ, ಸಾಮಾನ್ಯ ಜನ ಭೂದಾಖಲೆ ಪಡೆಯಲು ತಾಲ್ಲೂಕು ಕಚೇರಿಗೆ ಹತ್ತಾರು ಬಾರಿ ಅಲೆದಾಡಿ ಹಣ ಖರ್ಚು ಮಾಡಿದರೂ ದೊರೆಯುವುದು ಕಷ್ಟವಾಗಿದೆ. ಈಗಲಾದರು ಸರ್ಕಾರ ಸ್ಕ್ಯಾನ್‌ ಮಾಡಲಾಗುವ ಎಲ್ಲ ಭೂ ದಾಖಲೆಗಳು ಆನ್‌ಲೈನ್‌ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.