ADVERTISEMENT

ಮಾಗಡಿ: ಕೀಟ ಬಾಧೆಯಿಂದ ಇಳುವರಿ ಕುಂಠಿತ

ತೋಟಗಾರಿಕಾ ಬೆಳೆ ತಂತ್ರಜ್ಞಾನ ತರಬೇತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:36 IST
Last Updated 14 ಆಗಸ್ಟ್ 2025, 5:36 IST
ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿ ಕೆವಿಕೆಯಿಂದ ತೋಟಗಾರಿಕಾ ಬೆಳೆಗಳ ವೈಜ್ಞಾನಿಕ ತಂತ್ರಜ್ಞಾನ ಕುರಿತು ವಿಸ್ತರಣಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು
ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿ ಕೆವಿಕೆಯಿಂದ ತೋಟಗಾರಿಕಾ ಬೆಳೆಗಳ ವೈಜ್ಞಾನಿಕ ತಂತ್ರಜ್ಞಾನ ಕುರಿತು ವಿಸ್ತರಣಾ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು   

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತೊಟಗಾರಿಕಾ ಇಲಾಖೆ ಸಹಯೋಗದಲ್ಲಿ ತೋಟಗಾರಿಕಾ ಬೆಳೆಗಳ ವೈಜ್ಞಾನಿಕ ತಂತ್ರಜ್ಞಾನ ಕುರಿತು ತೋಟಗಾರಿಕಾ ಇಲಾಖೆಯ ವಿಸ್ತರಣಾ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ನಡೆಯಿತು.

ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಮುನೇಗೌಡ, ರಾಮನಗರದಲ್ಲಿ ತೆಂಗು ಮತ್ತು ಮಾವು ಪ್ರಮುಖ ಬೆಳೆಯಾಗಿದ್ದ, ಹವಾಮಾನ ವೈಪರಿತ್ಯ, ಕೀಟ ಮತ್ತು ರೋಗ ಬಾಧೆಯಿಂದ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಕಾಲಕಾಲಕ್ಕೆ ಸೂಕ್ತ ವೈಜ್ಞಾನಿಕ ತಂತ್ರಜ್ಞಾನ ಮಾಹಿತಿ ವಿಸ್ತರಣಾ ಅಧಿಕಾರಿಗಳಿಗೆ ಅವಶ್ಯವಿದ್ದು, ಅದರ ಮೂಲಕ ರೈತರ ಸಮಸ್ಯೆ ಪರಿಹರಿಸಿ, ಸೂಕ್ತ ಮಾರ್ಗದರ್ಶನ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಮಾವು ಅಭಿವೃದ್ಧಿ ಮಂಡಳಿ ಪರಿಣಿತ ಕೇಂದ್ರದ ಉಪನಿರ್ದೇಶಕಿ ಲಾವಣ್ಯ,  ಮಾವಿನಲ್ಲಿ ‘ಸವರುವಿಕೆ’ ಎಂಬುದು ಒಂದು ಮುಖ್ಯವಾದ ಬೇಸಾಯ ಕ್ರಮ. ಇದನ್ನು ಪ್ರತಿ ವರ್ಷ ಅನುಸರಿಸಿದರೆ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ. ಮಧ್ಯಭಾಗದ ರೆಂಬೆ ತೆಗೆದು, ಗಾಳಿ ಹಾಗೂ ಸೂರ್ಯನ ಕಿರಣಗಳು ಮರದ ಎಲ್ಲಾ ಭಾಗಗಳಿಗೂ ಸರಾಗವಾಗಿ ಬೀಳುವಂತೆ ಮಾಡಬೇಕು. ಹೆಚ್ಚಿನ ಸೂರ್ಯ ಕಿರಣಗಳು ಕಾಯಿಯ ಮೇಲೆ ಬೀಳುವುದರಿಂದ ಕಾಯಿಯ ಬಣ್ಣ ಹಾಗೂ ಗುಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.

ADVERTISEMENT

ಭಾರತ-ಇಸ್ರೇಲ್ ದೇಶದ ಆಕಾರ ನಿರ್ವಾಹಣೆ ತಾಂತ್ರಿಕತೆ, ಹೊಸದಾಗಿ ನಾಟಿ ಮಾಡಿರುವ ಮರಗಳಲ್ಲಿ ಸವರುವಿಕೆ, ಅಧಿಕ ಸಾಂದ್ರತೆ ಬೇಸಾಯ ಪದ್ಧತಿ, ಸವರುವಿಕೆ ನಂತರ ಕೈಗೊಳ್ಳಬೇಕಾದ ಕ್ರಮ ಕುರಿತು ಮಾಹಿತಿ ಹಂಚಿಕೊಂಡರು.

ತೆಂಗಿನಲ್ಲಿ ಕಂಡು ಬರುವ ರೈನೋಸರಸ್ಸ್ ದುಂಬಿ, ಕಪ್ಪು ತಲೆ ಕಂಬಳಿ ಹುಳು, ರುಗೋಸ್ಸ್ ಬಿಳಿ ನೊಣ, ಎಲೆ ಸುಳಿರೋಗ, ಮಾವಿನಲ್ಲಿ ಕಂಡು ಬರುವ ಹಣ್ಣಿನ ನೊಣ, ಹುಡಿ ದೋಷ, ಎಲೆ ಕೊರಕ, ನುಸಿ, ಬೂದಿ ರೋಗ, ಎಲೆ ಚುಕ್ಕಿ ರೋಗ ಮುಂತಾದ ಕೀಟ ಮತ್ತು ರೋಗ ಕುರಿತು ವೈಜ್ಞಾನಿಕ, ರಾಸಾಯನಿಕ, ಜೈವಿಕ, ಯಾಂತ್ರಿಕ ನಿರ್ವಹಣೆ ಹಾಗೂ ವೈಜ್ಞಾನಿಕವಾಗಿ ಸುರಕ್ಷಿತ ಕೀಟನಾಶಕ ಬಳಕೆಯ ಕುರಿತು ರೈತರಿಗೆ ಡಾ.ರಾಜೇಂದ್ರ ಪ್ರಸಾದ್ ಅವರು ಅರಿವು ಮೂಡಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲೆಗೆ ಸೂಕ್ತ ಹೊಸ ಬೆಳೆ

ಬೆಂಗಳೂರು ದಕ್ಷಿಣಕ್ಕೆ ಸೂಕ್ತವಾದ ತೋಟಗಾರಿಕೆ ಬೆಳೆಗಳಾದ ಬೆಣ್ಣೆ ಹಣ್ಣು ಮಕಾಡಮಿಯ ಮಾಡಹಾಗಲ ಬೆಳೆಗಳ ಬೇಸಾಯ ಕ್ರಮ ಕುರಿತು ಡಾ. ದೀಪಾ ಪೂಜಾರ ಮಾರ್ಗದರ್ಶನ ನೀಡಿದರು. ಮಾವು ಮತ್ತು ತೆಂಗು ಬೆಳೆಗಳ ಪಾತಿ ನಿರ್ವಹಣೆ ಲಘುಪೋಷಕಾಂಶಗಳ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.