
ಆನೇಕಲ್: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸವಿತಾ ಸಮಾಜದ ವಿರುದ್ಧ ಅಸಂವಿಧಾನಿಕ ಪದ ಬಳಸಿದ್ದು, ಹಿನ್ನೆಲೆಯಲ್ಲಿ ಆನೇಕಲ್ ತಾಲ್ಲೂಕು ಸವಿತಾ ಸಮಾಜ ಸಂಘದ ಪದಾಧಿಕಾರಿಗಳು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸವಿತಾ ಸಮಾಜದ ಬಗ್ಗೆ ಜಾತಿ ಸೂಚಕ ಪದ ಬಳಸುತ್ತಿರುವುದು ಖಂಡನೀಯ. ಸವಿತಾ ಸಮಾಜವು ಎಲ್ಲಾ ಸಮುದಾಯಗಳೊಂದಿಗೆ ಶಾಂತಿಯುತವಾಗಿ ಮತ್ತು ಸಹೋದರತೆಯಿಂದ ಬದುಕುತ್ತಿದೆ. ಆದರೆ ವಿಧಾನ ಪರಿಷತ್ ಸದಸ್ಯ ಅಸಂವಿಧಾನಿಕ ಪದವನ್ನು ಬಳಕೆ ಮಾಡಿದ್ದಾರೆ. ಜಾತಿ ಸೂಚಕ ಪದವನ್ನು ಬಳಕೆ ಮಾಡಿರುವುದರಿಂದ ಸವಿತಾ ಸಮಾಜದವರ ಮನಸ್ಸಿಗೆ ಘಾಸಿ ಉಂಟು ಮಾಡಿದೆ ಎಂದು ಆನೇಕಲ್ ಪುರಸಭೆ ಸದಸ್ಯ ರಾಜೇಂದ್ರ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾಜವನ್ನು ಗೌರವಿಸುವ ಸಲುವಾಗಿ ಸರ್ಕಾರ ಸವಿತಾ ಸಮಾಜ ಎಂದು ಸೂಚಿಸಿದೆ. ಆದರೆ ಕೆಲವು ರಾಜಕಾರಣಿಗಳು ಸವಿತಾ ಸಮಾಜದ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ವಿಧಾನ ಪರಿಷತ್ ಸದಸ್ಯರೇ ಸವಿತಾ ಸಮಾಜದ ಬಗ್ಗೆ ಅಸಂವಿಧಾನಿಕ ಪದವನ್ನು ಬಳಸುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸವಿತಾ ಸಮಾಜ ವಿರುದ್ಧದ ಅಸಂವಿಧಾನಿಕ ಪದವನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸವಿತಾ ಸಮಾಜ ಸಂಘದ ಹೀಲಲಿಗೆ ನಾಗವೇಣಿ, ಡೋಲು ಮುನಿರಾಜು, ಎಂ.ನರಸಿಂಹಯ್ಯ, ಎಂ.ಮುನಿರಾಜು, ಮಂಜುನಾಥ್, ವರದರಾಜು ಇದ್ದರು.
ಜಾತಿ ನಿಂದನೆ ಪ್ರಕರಣ ದಾಖಲಿಸಲು ಅವಕಾಶ ನೀಡಿ
ಅಸಂವಿಧಾನಿಕ ಪದದ ಬಳಕೆಯ ಹಿನ್ನೆಲೆಯಲ್ಲಿ ಸಿ.ಟಿ.ರವಿ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸವಿತಾ ಸಮಾಜ ವಿರುದ್ಧ ತುಚ್ಛವಾಗಿ ಮಾತನಾಡುವವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಬೇಕು. ಜಾತಿ ಸೂಚಕ ಪದವನ್ನು ಬಳಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆನೇಕಲ್ ಪುರಸಭೆ ಸದಸ್ಯ ರಾಜೇಂದ್ರ ಪ್ರಸಾದ್ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.