ಆನೇಕಲ್: ದಸಂಸಕ್ಕಾಗಿ ಹಲವಾರು ಹೋರಾಟಗಾರರು ತ್ಯಾಗ ಬಲಿದಾನ ಮಾಡಿದ್ದಾರೆ. ಅವರ ತ್ಯಾಗದಿಂದಾಗಿ ನಮಗೆ ಹಕ್ಕುಗಳು ದೊರೆತಿವೆ. ಅವರ ತ್ಯಾಗ ಚಿರಸ್ಮರಣೀಯ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ದಸಂಸ ಹೋರಾಟದಲ್ಲಿ ಹಿರಿಯರ ನೆನಪು ಮತ್ತು ದಲಿತ ಚಳವಳಿಯ ಮುಂದಿನ ಗುರಿ’ ಕುರಿತು ಮಾತನಾಡಿದರು.
ಸಂಘಟನೆಗಳ ಅಭಿವೃದ್ಧಿಗೆ ಶ್ರಮಿಸಿದ ಹಿರಿಯನ್ನು ಸ್ಮರಿಸಬೇಕಾದುದ್ದು ಮತ್ತು ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಕಾರ್ಯಕರ್ತರು ಜವಾಬ್ದಾರಿ. ಈ ಮಾಸ ಪಿತೃಪಕ್ಷವಾಗಿದೆ. ಹಿರಿಯರ ಪೂಜೆಯ ಹೆಸರಿಗೆ ತಿನ್ನಲು, ಕುಡಿಯಲು, ಸೇದಲು ಇಡುವ ಜೊತೆಗೆ ಅವರ ಆಲೋಚನೆ, ವಿಚಾರ ಮತ್ತು ಚಿಂತನೆಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಸಂಸ ಹೋರಾಟದ ಜೊತೆಗೆ ಸಾಹಿತಿಗಳು, ಲೇಖಕರು ಮತ್ತು ನಾಯಕರನ್ನು ಹುಟ್ಟುಹಾಕಿದೆ. ಹಲವಾರು ದಲಿತ ನಾಯಕರು ನಮ್ಮೊಂದಿಗಿಲ್ಲ. ಆದರೆ ಅವರ ಸಿದ್ಧಾಂತಗಳು, ಚಿಂತನೆಗಳು ನಮ್ಮೊಂದಿಗಿವೆ. ಬಸವಲಿಂಗಯ್ಯ ಅವರ ಬೂಸಾ ಚಳವಳಿ, ತಲೆಯ ಮೇಲೆ ಮಲ ಹೊರುವ ಪದ್ಧತಿ ವಿರುದ್ಧ ಹೋರಾಟಗಳು, ದಲಿತರ ಮೇಲಿನ ದೌರ್ಜನ್ಯಗಳು ದಸಂಸದ ಸ್ಥಾಪನೆಗೆ ಚಾರಿತ್ರಿಕ ಹಿನ್ನೆಲೆಯಾಗಿದೆ ಎಂದರು.
ಪ್ರೊ.ಬಿ.ಕೃಷ್ಣಪ್ಪ, ಕೋಟಗಾನಹಳ್ಳಿ ರಾಮಯ್ಯ ಅವರಂತಹ ಹೋರಾಟಗಾರರ ಚಿಂತನೆಗಳು ಇಂದಿನ ಯುವ ಪೀಳಿಗೆ ಆದರ್ಶ ಆಗಬೇಕು. ದಸಂಸದಿಂದ ಸ್ವಾಭಿಮಾನ, ಆತ್ಮಗೌರವ ಹಾಗೂ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ ಸಂಪ್ರದಾಯಿಕ ಚಿಂತನೆಗಳಿಗೆ ಪ್ರಮುಖ್ಯತೆ ಸಿಗುತ್ತಿದೆ. ಪ್ರಗತಿಪರ ಮತ್ತು ವೈಚಾರಿಕ ಚಿಂತನೆಗಳು ಹೆಚ್ಚಾಗಬೇಕು. ಸಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದು ಹೇಳಿದರು.
ಧರ್ಮಶಾಸ್ತ್ರಗಳಿಂದ ಅಸಮಾನತೆ: ‘ಡಾ.ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರ ಪಾತ್ರ’ ಕುರಿತು ಮಾತನಾಡಿ, ಬೆಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಚಂದ್ರಕಲಾ, ಕುಟುಂಬವನ್ನು ನಡೆಸುವ ಮಹಿಳೆ ಸಂಘಟನೆ ನಡೆಸಬಹುದು ಎಂಬುದನ್ನು ದಸಂಸ ಕಲಿಸಿಕೊಟ್ಟಿದೆ. ಧರ್ಮ ಶಾಸ್ತ್ರಗಳು ಅಸಮಾನತೆ ಸೃಷ್ಟಿಸುತ್ತವೆ. ಪುರುಷ ಪ್ರಧಾನ ವ್ಯವಸ್ಥೆ ಹೋಗಿ ನವ ಭಾರತದ ನಿರ್ಮಾಣಕ್ಕೆ ಮಹಿಳೆಯರು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ಶೋಷಣೆ, ದೌರ್ಜನ್ಯ ವಿರುದ್ಧ, ಹಕ್ಕು ಮತ್ತು ಅವಕಾಶಗಳಿಗಾಗಿ ಧ್ವನಿ ಎತ್ತುವ ಅವಶ್ಯಕತೆಯಿದೆ ಎಂದರು.
ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಅಧ್ಯಯನ ಶಿಬಿರದಿಂದ ಪದಾಧಿಕಾರಿಗಳಿಗೆ ಬದ್ಧತೆ, ಹೋರಾಟದ ನಿರ್ವಹಣೆಯ ಬಗ್ಗೆ ಮಾಹಿತಿ ದೊರೆತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಪದಾಧಿಕಾರಿಗಳು ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಶಿಬಿರದಿಂದ ಪದಾಧಿಕಾರಿಗಳಿಗೆ ಆತ್ಮ ವಿಮರ್ಶನೆ ಮತ್ತು ಚಿಂತನೆಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
‘ಒಳಮೀಸಲಾತಿಯಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಐಕ್ಯತೆಯ ಕಡೆಗೆ’ ವಿಷಯದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುಧಾಮದಾಸ್ ವಿಚಾರ ಮಂಡನೆ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಾದ ಎನ್.ನಾಗರಾಜ್, ಶಿವಾಜಿ ಗಣೇಶನ್, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ದೇವರಾಜು, ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್, ಮುಖಂಡರಾದ ಅಚ್ಯುತರಾಜು, ಸುಧಾ ವೆಂಕಟೇಶ್, ಮಂಜುನಾಥ್ ಶರೇವಾಡ, ಸಂಪಂಗಿರಾಮು, ದಶರಥ್ ಮಾರಗೊಂಡನಹಳ್ಳಿ, ರವಿ, ನಿರ್ಮಲ ಇದ್ದರು.
ಮಹಿಳೆಯರು ಟಿವಿ ಮತ್ತು ಯುಟ್ಯೂಬ್‌ಗಳನ್ನು ಕಡಿಮೆ ಮಾಡಬೇಕು. ಟಿವಿಗಳಲ್ಲಿ ಪ್ರತಿನಿತ್ಯ ಕರಂಗುಲಿ ಮಾಲೆ ರುದ್ರಕ್ಷಿಯ ಮಹತ್ವ ವರಮಹಾಲಕ್ಷ್ಮಿ ಗೌರಿ ವ್ರತದ ಬಗ್ಗೆ ಹೇಳುತ್ತಿರುತ್ತಾರೆ. ಯೂಟ್ಯೂಬ್‌ಗಳಲ್ಲಿ ಸೌಂದರ್ಯದ ಬಗ್ಗೆಯೇ ಹೆಚ್ಚು ಹೇಳುತ್ತಾರೆ. ಇವುಗಳನ್ನು ಕೇಳುತ್ತಾ ಇರುವುದರಿಂದ ಮಹಿಳೆಯರು ಸಮಯ ವ್ಯರ್ಥವಾಗುತ್ತದೆ. ಈ ಸಮಯವನ್ನು ನಮ್ಮ ಹಕ್ಕುಗಳು ನಮ್ಮ ಅಸ್ಮಿತೆಗಾಗಿ ಮೀಸಲಿಡಬೇಕು ಎಂದು ಬೆಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಚಂದ್ರಕಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.