ADVERTISEMENT

ರಾಗಿ ಹಣ ಬಿಡುಗಡೆಗೆ ಆಗ್ರಹ; ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 4:02 IST
Last Updated 14 ಜುಲೈ 2021, 4:02 IST
ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಗಿ ಹಣ ನೀಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು
ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಗಿ ಹಣ ನೀಡುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿರುವ ರಾಗಿ ಹಣ ಸರ್ಕಾರ ತಕ್ಷಣ ರೈತರ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಂಗಳವಾರ ನಗರದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಆರ್‌.ಸತೀಶ್‌, ಮಾರ್ಚ್‌ನಲ್ಲಿ ರೈತರಿಂದ ಖರೀದಿ ಮಾಡಿರುವ ರಾಗಿ ಹಣ ನಾಲ್ಕು ತಿಂಗಳು ಕಳೆದರೂ ₹13ಕೋಟಿಯಷ್ಟು ಹಣ ರೈತರಿಗೆ ಬರಬೇಕಿದೆ. ತಾಲ್ಲೂಕಿನಲ್ಲಿ ಒಂದು ವಾರದಿಂದಲೂ ಉತ್ತಮ ಮಳೆಯಾಗುತ್ತಿದೆ. ಈಗಷ್ಟೇ ಬಿತ್ತನೆ ಕೆಲಸ ಆರಂಭವಾಗಿವೆ. ಆದರೆ, ರೈತರಿಗೆ ರಾಗಿ ಸರಬರಾಜು ಮಾಡಿರುವ ಹಣಬಾರದೇ ಇರುವ ಕಾರಣದಿಂದಾಗಿ ಉಳುಮೆ ಮಾಡಲು, ಬಿತ್ತನೆ ಕೆಲಸಗಳಿಗಾಗಿ ಖಾಸಗಿಯವರಿಂದ ಸಾಲ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಕೇಂದ್ರ ರಾಜ್ಯ ಸರ್ಕಾರದ ಸಚಿವರು, ರೈತರು ಕಷ್ಟಪಟ್ಟು ಬೆಳೆದು ಕೊಟ್ಟಿರುವ ಹಣ ಇದುವರೆಗೂ ಸಂದಾಯವಾಗಿಲ್ಲ. ಇನ್ನು ರೈತರ ಆದಾಯ ದ್ವಿಗುಣ ಯಾವ ರೀತಿಯಲ್ಲಿ ಆಗಲು ಸಾಧ್ಯವಾಗಲಿದೆಯೋ ತಿಳಿಯದಾಗಿದೆ. ತೈಲಬೆಲೆ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ದುಬಾರಿಯಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಯಾವುದೇ ಆರ್ಥಿಕ ಪ್ಯಾಕೆಜ್‌ ಹಣ ಯಾವೊಬ್ಬ ರೈತರಿಗೂ ದೊರೆತಿಲ್ಲ. ಸರ್ಕಾರದ ವಿಳಂಬ ನೀತಿಯನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಕಂಪನಿಗಳು ತರಕಾರಿ, ಹಣ್ಣು ತಮಗೆ ಇಷ್ಟ ಬಂದಷ್ಟು ಬೆಲೆಗೆ ಖರೀದಿಸುತ್ತಿವೆ ಎಂದು ದೂರಿದರು.

ADVERTISEMENT

ರಾಗಿ ಖರೀದಿ ಹಣ ರೈತರಿಗೆ ತಕ್ಷಣ ಬಿಡಿಗಡೆ ಮಾಡುವಂತೆ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಸ್‌.ಎ.ಶಿವರಾಜ್‌, ತೂಬಗೆರೆ ಹೋಬಳಿ ಅಧ್ಯಕ್ಷ ಮುನಿನಾರಾಯಣಪ್ಪ, ಕಾರ್ಯದರ್ಶಿ ರಾಜು, ಕಸಬಾ ಹೋಬಳಿ ಅಧ್ಯಕ್ಷ ಮಹಾದೇವ್‌, ಮುಖಂಡರಾದ ಶಿರವಾರ ರವಿ, ನಾರಾಯಣಸ್ವಾಮಿ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.