ADVERTISEMENT

ಎರಡು ಶಿಲಾಶಾಸನ ಪತ್ತೆ; ಸಂರಕ್ಷಣೆಗೆ ಸಾಹಿತಿ ಗುರುಸಿದ್ದಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 13:20 IST
Last Updated 28 ಏಪ್ರಿಲ್ 2019, 13:20 IST
ಚನ್ನರಾಯಪಟ್ಟಣ ಹೋಬಳಿ ಪೋಲನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿರುವ ಶಿಲಾಶಾಸನಗಳನ್ನು ಸಾಹಿತಿ ಗುರುಸಿದ್ದಯ್ಯ ಹಾಗೂ ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಅವರು ತೋರಿಸುತ್ತಿರುವುದು 
ಚನ್ನರಾಯಪಟ್ಟಣ ಹೋಬಳಿ ಪೋಲನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿರುವ ಶಿಲಾಶಾಸನಗಳನ್ನು ಸಾಹಿತಿ ಗುರುಸಿದ್ದಯ್ಯ ಹಾಗೂ ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಅವರು ತೋರಿಸುತ್ತಿರುವುದು    

ವಿಜಯಪುರ: ರಾಷ್ಟ್ರಕೂಟರು, ಪಲ್ಲವರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಆವತಿ ನಾಡಪ್ರಭುಗಳ ಆಳ್ವಿಕೆಯಲ್ಲಿದ್ದ ತಾಲ್ಲೂಕಿನ ಪೋಲನಹಳ್ಳಿ ಬಳಿ ಪುರಾತನ ಕಾಲದ ಶಿಲಾಶಾಸನಗಳು ಪತ್ತೆಯಾಗಿವೆ ಇಂತಹ ಶಿಲಾಶಾಸನಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು ಎಂದು ಸಾಹಿತಿ ಗುರುಸಿದ್ದಯ್ಯ ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿಯ ಪೋಲನಹಳ್ಳಿ ಸರ್ವೇ ನಂಬರ್ 49/2 ರಲ್ಲಿ 6 ಅಡಿ ಉದ್ದ, 3 ಅಡಿ ಅಗಲವಿರುವ ವಿವಿಧ ಕಲಾಕೃತಿಗಳ ಕೆತ್ತನೆಯುಳ್ಳ ವೀರಗಲ್ಲು ಹಾಗೂ ತಮಿಳು ಶಾಸನವಿರುವ ಎರಡು ಕಲ್ಲುಗಳು ಪತ್ತೆಯಾಗಿವೆ. ಇದರಲ್ಲಿರುವ ಶಾಸನಗಳ ಸಾರಾಂಶದ ಕುರಿತು ಪುರಾತತ್ವ ಇಲಾಖೆ ಅಥವಾ ಶಾಸನಗಳನ್ನು ಓದುವ ತಜ್ಞರಿಂದ ಜನರಿಗೆ ತಿಳಿಸಿಕೊಡುವ ಪ್ರಯತ್ನವಾಗಬೇಕು. ಇದಕ್ಕೂ ಮುಂಚೆ ಇದುವರೆಗೂ ತಾಲ್ಲೂಕಿನಲ್ಲಿ ಲಭ್ಯವಾಗಿರುವ 81 ಶಾಸನಗಳ ಪೈಕಿ 17 ತಮಿಳು ಶಾಸನಗಳಾಗಿವೆ.

ಲಭ್ಯವಾಗಿರುವ ಶಿಲಾಶಾಸನಗಳು ಭೂಮಿಯ ಆಳದಲ್ಲಿ ಹುದುಗಿಹೋಗಿದ್ದ ಕಾರಣ ಯಾರ ಗಮನಕ್ಕೂ ಬಂದಿರಲಿಲ್ಲ‌. ದೇವನಹಳ್ಳಿಯಲ್ಲಿ ಐತಿಹಾಸಿಕ ಕೋಟೆಯಿದ್ದು, ದ್ರಾವಿಡ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿದೆ. ನಂತರದ ದಿನಗಳಲ್ಲಿ ಮಾರ್ಪಾಡಾಗಿರುವ ಅನೇಕ ಪ್ರಾಚೀನ ದೇವಾಲಯಗಳು ನಿರ್ಮಾಣವಾಗಿವೆ. ಇತಿಹಾಸ ಸಾರುವ ವೀರಗಲ್ಲುಗಳು ಮಾಸ್ತಿಗಲ್ಲುಗಳು ಕಂಡು ಬಂದಿವೆ ಎಂದರು.

ADVERTISEMENT

ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಮಾತನಾಡಿ ‘ಪೋಲನಹಳ್ಳಿ ಗ್ರಾಮದಲ್ಲಿ ಈ ಹಿಂದೆಯೂ ಶಿಲಾಶಾಸನಗಳು ಕಂಡು ಬಂದಿದ್ದವು. ಇವು ಕಂಡು ಬಂದಿದ್ದ ಸ್ಥಳಗಳಲ್ಲಿ ನಿಧಿಯಿರಬಹುದು ಎನ್ನುವ ಕಾರಣಕ್ಕೆ ಗ್ರಾಮದ ಹಿರಿಯರು ಯಾರನ್ನೂ ಶಾಸನಗಳ ಬಳಿಗೆ ಹೋಗಲು ಬಿಡುತ್ತಿರಲಿಲ್ಲ. ನಿಧಿಯ ಆಸೆಗಾಗಿ ಕೆಲ ಶಾಸನ, ಬಂಡೆಗಳನ್ನು ಒಡೆದಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕಿನ ಅಗಲಕೋಟೆ, ರಾಯಸಂದ್ರ, ಸಾದಹಳ್ಳಿ, ಕುಂದಾಣ ಬೆಟ್ಟ, ಸೋಲೂರು, ಕೋಟೆ ಸಿದ್ದೇಶ್ವರ ದೇವಾಲಯದ ಹಿಂಭಾಗ, ಕೊಯಿರಾ ಗ್ರಾಮದ ವೀರಗಲ್ಲಿನ ಶಾಸನ, ದೊಡ್ಡಸಣ್ಣೆ, ಬಸವಣ್ಣ ದೇವಾಲಯದ ಹತ್ತಿರ, ಚನ್ನಹಳ್ಳಿ ದೇವಾಲಯ, ಲಿಂಗದೀರಗೊಲ್ಲಹಳ್ಳಿ ಗ್ರಾಮಗಳಲ್ಲಿ ಶಾಸನಗಳು ಕಂಡುಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.