ದೇವನಹಳ್ಳಿ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏ.21 ರಿಂದ ಜೂ.4 ರವರೆಗೆ ಜಿಲ್ಲೆಯಾದ್ಯಂತ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಮತ್ತು ಚರ್ಮ ಗಂಟು ರೋಗದ ಲಸಿಕಾ ಅಭಿಯಾನ ನಡೆಯಲಿದ್ದು, ರೈತರು ತಮ್ಮ ಜಾನುವಾರುಗಳಿಗೆ ರೋಗ ಬರದಂತೆ ತಡೆಯಲು ತಪ್ಪದೇ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಕೋರಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ 7ನೇ ಸುತ್ತಿನ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ಸಹಯೋಗದಲ್ಲಿ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲುಬಾಯಿ ಜ್ವರವು ವೈರಾಣುವಿನಿಂದ ಜಾನುವಾರುಗಳಿಗೆ ಬರುವ ಕಾಯಿಲೆ. ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೆ ಒಂದು ರಾಸುವಿನಿಂದ ಇನ್ನೊಂದಕ್ಕೆ ಹರಡುತ್ತದೆ. ಚರ್ಮಗಂಟು ರೋಗವು ವೈರಾಣುವಿನಿಂದ ಬರುವ ರೋಗ. ಈ ರೋಗಗಳನ್ನು ನಿಯಂತ್ರಿಸಲು ಜಾನುವಾರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು ಎಂದರು.
ಲಸಿಕೆ ಹಾಕುವವರು ನಿಮ್ಮ ಗ್ರಾಮಕ್ಕೆ, ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ತಪ್ಪದೇ ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ರೋಗ ಬರದಂತೆ ಜಾನುವಾರು ರಕ್ಷಿಸಿ. ಈ ಮೂಲಕ ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಾನುವಾರಗಳಿಗೆ ಅರೋಗ್ಯದ ಸಮಸ್ಯೆ ಕಂಡುಬಂದಲ್ಲಿ ಪಶು ಸಹಾಯವಾಣಿ:1962ಗೆ ಕರೆಮಾಡಿ, ನೋಂದಾಯಿಸಿದ ನಂತರ ಹತ್ತಿರದ ಸಂಚಾರ ತುರ್ತು ಪಶು ಚಿಕಿತ್ಸಾಲಯದ ಆಂಬುಲೆನ್ಸ್ ಸೇವೆ ಪಡೆಯಬಹುದು ಎಂದರು.
ಪಶುಪಾಲಾನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಗದೀಶ್ ಕುಮಾರ್, ತಾಲ್ಲೂಕು ಪಶು ವೈದ್ಯಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.