ದೇವನಹಳ್ಳಿ: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಯೋಜನೆಯಡಿ ಅನುಕೂಲಸ್ಥರೇ ಖಾಸಗಿ ಶಾಲೆಯಲ್ಲಿ ಅವರ ಮಕ್ಕಳನ್ನು ಸೇರಿಸುತ್ತಿದ್ದು, ಹಿಂದುಳಿದವರ ಮಕ್ಕಳಿಗಾಗಿ ರೂಪಿಸಲಾಗಿರುವ ಯೋಜನೆ ದುರ್ಬಳಕೆ ಆಗುತ್ತಿದ್ದು ಎಂದು ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬೆಂಗಳೂರು ಉಸ್ತುವಾರಿ ಮ್ಯಾಥ್ಯೂ ಮುನಿಯಪ್ಪ ಆರೋಪಿಸಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಉಳ್ಳುವರೇ ಹೆಚ್ಚಾಗಿ ಆರ್‌ಟಿಇಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ತಲುಪಬೇಕಾದ ಸಮುದಾಯಕ್ಕೆ ತಲುಪುತ್ತಿಲ್ಲ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಎಲ್ಲೆಡೆ ಸರ್ಕಾರದ ಶಾಲೆಗಳಿದ್ದು ಈ ರೀತಿಯ ಯೋಜನೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದ್ದು, ಶೌಚಾಲಯ ಸ್ವಚ್ಛತೆ, ಪೀಟ್ ಗುಂಡಿಗಳ ದುರಸ್ತಿ ಕಾರ್ಯ ಮಾಡುತ್ತಿರುವುದು ಖಂಡನೀಯ ಕೃತ್ಯವಾಗಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸಂಬಳ ಪಡೆಯುವ ನೌಕರರು ಸರ್ಕಾರಿ ಶಾಲೆಯಲ್ಲಿಯೇ ಅವರ ಮಕ್ಕಳನ್ನು ಓದಿಸುವಂತಹ ಕಾನೂನು ಮಾಡಿದಾಗಲೇ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಹೇಳಿದರು.
ಎಲ್ಲ ಸರ್ಕಾರಿ ಶಾಲೆಗಳಿಗೂ ತಡೆಗೋಡೆ ನಿರ್ಮಾಣ, ಸ್ಥಳೀಯ ಗ್ರಾ.ಪಂನಿಂದ ಸಿಸಿಟಿವಿ ಅಳವಡಿಕೆ ಮಾಡಬೇಕು. ಇದರಿಂದಾಗಿ ರಾತ್ರಿ ವೇಳೆ ಶಾಲೆಯ ಮೈದಾನದಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಮನಗರ ಉಮೇಶ್, ಉಡುಪಿಯ ಜೋತಿ ಶೆಟ್ಟಿ, ಸುಮಾ, ಹರೀಶ್, ಕೊಡುಗಿನ ಸಿದ್ಧಲಿಂಗಪ್ಪ, ತುಮಕೂರಿನಿಂದ ಉಮೇರ ಖಾನಂ, ಕೋಲಾರದ ಶ್ರೀನಿವಾಸ್, ನೆಲಮಂಗಲದ ರಾಜೇಶ್, ಕಾರ್ಯದರ್ಶಿ ನಾಗವೇಣಿ, ಹೊಸಕೋಟೆಯ ಗಂಗಾಧರ್, ದೊಡ್ಡಬಳ್ಳಾಪುರದ ರಾಮಮೂರ್ತಿ, ದೇವನಹಳ್ಳಿಯ ಕೃಷ್ಣಪ್ಪ, ಕೃಷ್ಣ, ಬಿದಲೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮದ್ದೂರಪ್ಪ, ಮಂಡಿಬೆಲೆಯ ಮಂಜುನಾಥ್, ಚಿಕ್ಕಬಳ್ಳಾಪುರ ಶಿವಕುಮಾರ್ ಇದ್ದರು.
31ಕ್ಕೆ ಫುಲೆ ಜಯಂತಿ ಪಟ್ಟಣದ ಗುರುಭವನದಲ್ಲಿ ಜನವರಿ 31 ರಂದು ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಸಾವಿತ್ರಬಾಯಿ ಫುಲೆ ಅವರ 139 ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ನಟ ಚೇತನ್ ಮಾಜಿ ಸಂಸದೆ ಬಿ.ಟಿ. ಲಲಿತಾ ನಾಯಕ್ ಭಾಗವಹಿಸಲಿದ್ದಾರೆ ಎಂದು ಮ್ಯೂಥ್ಯೂ ಮುನಿಯಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.