ದೇವನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.
ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ತೋಟಗಾರಿಕಾ ಉಪನಿರ್ದೇಶಕಿ ಕೆ. ಪವಿತ್ರಾ, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಹಂತದಲ್ಲಿರುವ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು ಸಕ್ರಿಯ ಆಗಬೇಕು. ಈ ಮೂಲಕ ಜೀವ ವೈವಿಧ್ಯ ಸಂರಕ್ಷಣೆಗೆ ಇರುವ ಕಾನೂನುಗಳು ಹಾಗೂ ಗ್ರಾ.ಪಂ. ಮಟ್ಟದ ಸಮಿತಿಗಳ ಅಧಿಕಾರಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿ ಕೆ.ಆರ್. ಪ್ರಸನ್ನ, ಗ್ರಾ.ಪಂ ಅಧ್ಯಕ್ಷರೇ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ನೇಮಿಸಬೇಕಾಗಿದ್ದು, ಗ್ರಾ.ಪಂ ಮಟ್ಟದ ಸಮಿತಿಯಲ್ಲಿ ಕನಿಷ್ಠ 7 ಜನ ಮತ್ತು ಗರಿಷ್ಠ 11 ಸದಸ್ಯರು ಇರಲು ಅವಕಾಶವಿದೆ. ಈ ಸಮಿತಿಗೆ ಪಿಡಿಒಗಳೇ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದರು.
ವರ್ಷದಲ್ಲಿ ಕನಿಷ್ಠ ನಾಲ್ಕು ಸಭೆಗಳನ್ನು ನಡೆಸುವ ಮೂಲಕ ಗ್ರಾ.ಪಂ ವ್ಯಾಪ್ತಿಯ ಪ್ರಾಣಿ-ಪಕ್ಷಿ, ಗಿಡ-ಮರ ಒಳಗೊಂಡು ಒಟ್ಟಾರೆ ಪರಿಸರದ ಸಂರಕ್ಷಣೆಗೆ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಬೇಕು. ಕಳೆ ನಾಶಕ ಬಳಕೆ ಕಡಿಮೆ ಮಾಡಿ, ರೈತರು ಸಾವಯವ ಕೃಷಿಯತ್ತ ಗಮನಹರಿಸಬೇಕು. ಮಾವನ ಸಂಕುಲದ ಉಳಿವಿಗಾಗಿ ಜೀವ ವೈವಿಧ್ಯತೆ ರಕ್ಷಣೆ ಅಗತ್ಯ ಎಂದರು.
ತಾ.ಪಂ ಸಹಾಯಕ ನಿರ್ದೆಶಕ ದುರ್ಗಪ್ಪ, ಅಮರನಾರಾಯಣ್, ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಬಾಬು, ರೇಷ್ಮೆ ಸಹಾಯಕ ನಿರ್ದೇಶಕಿ ಕಮಲಮ್ಮ, ವಲಯ ಅರಣ್ಯ ಅಧಿಕಾರಿ ನಾಗಾರ್ಜುನ್, ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕಾರ್ಯದರ್ಶಿ ಒಳಗೊಂಡು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.