ದೇವನಹಳ್ಳಿ: ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ರಾಜ್ಯದ ಸರಾಸರಿ ತಲಾ ಆದಾಯದಲ್ಲಿ ಹಿಂದುಳಿದಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದಿದೆ ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗ ಅಧ್ಯಕ್ಷ ಪ್ರೊ.ಎಂ.ಗೋವಿಂದ ರಾವ್ ತಿಳಿಸಿದರು.
ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ 2024ರಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಯು ಕೃಷಿ, ಕೈಗಾರಿಕೆ, ಮೂಲ ಸೌಲಭ್ಯ, ಸಾಮಾಜಿಕ ಸೌಲಭ್ಯ, ಹಣಕಾಸಿನ ಮತ್ತು ತಾಂತ್ರಿಕ ಮೂಲಸೌಕರ್ಯ ಮುಂತಾದ ವಲಯಗಳ ಅಭಿವೃದ್ಧಿ ಗುರುತಿಸಿ, ಸೂಚ್ಯಂಕ ನಿಗದಿಪಡಿಸಲಿದೆ. ಸಮಿತಿಯು ಇದೇ ವರ್ಷ ಅಕ್ಟೋಬರ್‌ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ಮೂಲಸೌಕರ್ಯ, ತಂತ್ರಜ್ಞಾನ, ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ವಿಷಯಾಧಾರಿತ ಚರ್ಚೆ ನಡೆಸಿದ ಸಮಿತಿಯು ಅಧಿಕಾರಿಗಳಿಂದ, ಜಿಲ್ಲೆಯ ಸಂಘ –ಸಂಸ್ಥೆಗಳ ಮುಖಂಡರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಆಯೋಗವು ಗುರುತಿಸಿರುವ ವಿಷಯಗಳಲ್ಲದೇ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ವಿಷಯಗಳನ್ನು ಗಮನಿಸಲಿದೆ’ ಎಂದರು.
ಸಮಿತಿಯು ರಾಜ್ಯದ 240 ತಾಲ್ಲೂಕುಗಳ ಅಧ್ಯಯನ ನಡೆಸಲಿದೆ. ಕಲಬುರ್ಗಿ, ಬೆಳಗಾವಿ, ಮೈಸೂರು, ಬೆಂಗಳೂರು ಎಂಬ ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ. 240 ತಾಲ್ಲೂಕುಗಳಲ್ಲಿ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ, ಮುಂದುವರಿದ ಮತ್ತು ಅತೀ ಮುಂದುವರಿದ ತಾಲ್ಲೂಕು ಎಂದು ವಿಂಗಡಿಸಿ, ಯಾವ ಕಾರಣಕ್ಕೆ ಹಿಂದುಳಿದಿದೆ, ಮುಂದುವರೆದಿರುವ ತಾಲ್ಲೂಕಿಗಳಿಂದ ಹಿಂದುಳಿದ ತಾಲ್ಲೂಕುಗಳನ್ನು ಹೇಗೆ ಸುಧಾರಣೆ ಮಾಡಬೇಕು ಎಂಬ ಮಾಹಿತಿಯನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಶಿಕ್ಷಣ, ಆರೋಗ್ಯ, ತಲಾ ಆದಾಯ, ಕೃಷಿ, ಹೈನಗಾರಿಕೆ, ಕೈಗಾರಿಕೆ, ಸೇವಾ ವಿಭಾಗ, ಸಾಮಾಜಿಕ ವಲಯಗಳ ಮಾನದಂಡಗಳ ಆಧಾರದ ಮೇಲೆ ಅಭಿವೃದ್ಧಿ ಸೂಚ್ಯಂಕ ನಿರ್ಧರಿಸಲಾಗುತ್ತದೆ. ಈ ಸೂಚ್ಯಂಕ ಆಧರಿಸಿ ಹಿಂದುಳಿದ ತಾಲ್ಲೂಕುಗಳು ಯಾವುವು ಎಂಬುದನ್ನು ಗುರುತಿಸಿ ಆ ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಆರ್ಥಿಕ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಲಿದೆ ಎಂದು ತಿಳಿಸಿದರು.
ರಾಜ್ಯದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 2007 ರಿಂದ 2023 ವರೆಗೆ ₹43,456 ಕೋಟಿ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ₹35,380 ಕೋಟಿ ಬಿಡುಗಡೆ ಆಗಿ ₹32,610 ಕೋಟಿ ಮಾತ್ರ ಖರ್ಚಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಆಯೋಗದ ಸದಸ್ಯ ಎಂ.ಎಚ್. ಸೂರ್ಯನಾರಾಯಣ, ಜಿ.ಪಂ ಸಿಇಒ ಕೆ.ಎನ್.ಅನುರಾಧ, ಉಪಕಾರ್ಯದರ್ಶಿ ರಮೇಶ್, ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ ಉಪಸ್ಥಿತರಿದ್ದರು.
ರಾಜಧಾನಿಯ ಮಗ್ಗುಲಲ್ಲಿ ಇದ್ದರೂ ಸೌಕರ್ಯದಿಂದ ವಂಚಿತ ಜಿಲ್ಲೆ
ಜಿಲ್ಲೆಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದರು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರು ಪೂರೈಕೆ ರೈಲ್ವೇ ಸೌಕರ್ಯ ತ್ಯಾಜ್ಯ ನಿರ್ವಹಣೆ ಘಟಕಗಳು ನೀರು ಶುದ್ಧೀಕರಣ ಘಟಕಗಳು ಸ್ಥಾಪನೆ ಆಗಬೇಕಿದೆ. ಮೆಡಿಕಲ್ ಕಾಲೇಜು ಆರಂಭವಾಗಬೇಕು. ಜಿಲ್ಲಾ ಆಸ್ಪತ್ರೆಗೆ ಅನುದಾನದ ಅವಶ್ಯಕತೆ ಇದೆ. ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಪತ್ರದ ಮೂಲಕ ನೀಡಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಯೋಗವನ್ನು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.