ADVERTISEMENT

ದೇವನಹಳ್ಳಿ | ಇ–ಸ್ವತ್ತು: ಮಾನದಂಡಕ್ಕೆ ಜನರ ಆಕ್ಷೇಪ

ಎಂ.ಮುನಿನಾರಾಯಣ
Published 14 ಡಿಸೆಂಬರ್ 2024, 4:57 IST
Last Updated 14 ಡಿಸೆಂಬರ್ 2024, 4:57 IST
   

ವಿಜಯಪುರ(ದೇವನಹಳ್ಳಿ): ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳದಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು 14.06.2013ರ ಹಿಂದಿನ ವಿದ್ಯುತ್ ಬಿಲ್ ನೀಡಬೇಕು ಎಂಬ ಮಾನದಂಡ ರೂಪಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

2013ರ ಹಿಂದೆ ಮನೆಗಳು ನಿರ್ಮಾಣ ಮಾಡಿಕೊಂಡಿರುವವರು 12 ವರ್ಷಗಳ ಹಿಂದಿನ ವಿದ್ಯುತ್ ಬಿಲ್‌ ಇಟ್ಟುಕೊಂಡಿರಲು ಸಾಧ್ಯವೇ?. ಆಗ ಮನೆ ಇಲ್ಲದವರು ಖಾಲಿ ನಿವೇಶನಗಳಿಗೆ ಎಲ್ಲಿಂದ ವಿದ್ಯುತ್ ಬಿಲ್ ತಂದುಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಇ-ಸ್ವತ್ತು ದಾಖಲೆ ಕೇಳುತ್ತಾರೆ. 2013ರ ನಂತರದಲ್ಲಿ ಮನೆಗಳು ನಿರ್ಮಾಣ ಮಾಡಿಕೊಂಡಿರುವವರು ನಂತರದ ವಿದ್ಯುತ್ ಬಿಲ್‌ ಕೊಟ್ಟರೂ ಪ್ರಯೋಜನವಾಗುತ್ತಿಲ್ಲ. 2013ರ ಹಿಂದಿನ ಬಿಲ್‌ ಕೇಳುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಖಾಲಿ ನಿವೇಶನಗಳಿದ್ದರೆ ನಿಬಂಧನೆ ಮೇರೆಗೆ 11ಬಿ ಖಾತೆ ಮಾಡುತ್ತಿದ್ದಾರೆ ಆದರೆ, ಬ್ಯಾಂಕ್‌ಗಳಲ್ಲಿ ಈ ದಾಖಲೆ ಅಂಗೀಕರಿಸುತ್ತಿಲ್ಲ ಎಂದು ಇ–ಸ್ವತ್ತು ಮಾಡಿಸಲು ಬಂದಿದ್ದ ವಿವೇಕ್ ಹೇಳಿದರು.

ADVERTISEMENT

‘ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಗೋಮಾಳದಲ್ಲಿ ಮನೆಗಳು ಕಟ್ಟಿಕೊಂಡಿರುವವರು ಹಕ್ಕುಪತ್ರಗಳಿಗಾಗಿ 94ಸಿ ಅರ್ಜಿಗಳು ಸಲ್ಲಿಸಿದ್ದೇವೆ. ಕೆಲವರಿಗೆ ಮಾತ್ರವೇ ಹಕ್ಕುಪತ್ರ ವಿತರಣೆಯಾಗಿವೆ. ಬಹಳಷ್ಟು ಮಂದಿಗೆ ಹಕ್ಕುಪತ್ರ ಬಂದಿಲ್ಲ. ಹಕ್ಕು ಪತ್ರಗಳಾದರೂ ಬಂದರೆ ಅದರ ಆಧಾರದಲ್ಲಿ ಖಾತೆ ಮಾಡಿಕೊಡುವುದಾಗಿ ಅಧಿಕಾರಿ ಹೇಳುತ್ತಾರೆ. ಸರ್ಕಾರ, ಅಕ್ರಮ-ಸಕ್ರಮದಡಿ ಮನೆಗಳು ನಿರ್ಮಾಣ ಮಾಡಿಕೊಂಡಿರುವ ಜಾಗಗಳನ್ನು ಖಾತೆ ಮಾಡಿಕೊಡಬೇಕು. ಇಲ್ಲವೇ ಇ-ಸ್ವತ್ತು ಖಾತೆ ಮಾಡಿಸಲು ವಿಧಿಸಿರುವ ನಿಬಂಧನೆ ಸಡಿಲಗೊಳಿಸಿ, ಬಡವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮತ್ತೊಬ್ಬ ಅರ್ಜಿದಾರ ಸುರೇಶ್ ಒತ್ತಾಯಿಸಿದ್ದಾರೆ.

ವಿದ್ಯುತ್‌ ಬಿಲ್‌ ಕೊಡಲೇ ಬೇಕು

ಕ್ರಯಪತ್ರವಿದ್ದರೆ, ಭೂಪರಿವರ್ತನೆಯಾಗಿದ್ದರೆ, ಅಥವಾ ಹಕ್ಕು ಪತ್ರವಿದ್ದರೆ, ಅಂತಹ ಜಾಗವನ್ನು ಇ-ಸ್ವತ್ತು ಖಾತೆ ಮಾಡಿಕೊಡಲು ಅಡ್ಡಿಯಿಲ್ಲ. ನಮ್ಮ ತಾಲ್ಲೂಕಿನಲ್ಲಿ ಯಾವ ಪಂಚಾಯಿತಿಯಲ್ಲೂ ಅಂತಹ ಯಾವ ಅರ್ಜಿಗಳೂ ಬಾಕಿ ಉಳಿದಿಲ್ಲ. ಸರ್ಕಾರಿ ಗೋಮಾಳದಲ್ಲಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದರೆ, 14.06.2013 ರ ಹಿಂದಿನ ವಿದ್ಯುತ್ ಬಿಲ್ ಕೊಡಬೇಕಾಗುತ್ತದೆ. ಆದರೆ, ಮಾರಾಟ ಮಾಡುವುದಕ್ಕೆ ಅವಕಾಶವಿರುವುದಿಲ್ಲ.

-ಶ್ರೀನಾಥ್ ಗೌಡ, ಇಒ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.