ADVERTISEMENT

ತಪಾಸಣೆ ನೆಪದಲ್ಲಿ ಶರ್ಟ್‌ ತೆಗೆಸಿದರು...

ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ವಿರುದ್ಧ ಮಹಿಳೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 16:26 IST
Last Updated 4 ಜನವರಿ 2023, 16:26 IST
ಕೃಷಾನಿ ಗಾಧ್ವಿ ರವರು ಆರೋಪ ಮಾಡಿರುವ ಟ್ವೀಟ್‌
ಕೃಷಾನಿ ಗಾಧ್ವಿ ರವರು ಆರೋಪ ಮಾಡಿರುವ ಟ್ವೀಟ್‌   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ಶರ್ಟ್‌ ತೆಗೆಯುವಂತೆ ಹೇಳಿದರು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪ ಮಾಡಿದ್ದಾರೆ.

ಈ ಆರೋಪ ಸುಳ್ಳು ಎಂದು ತಳ್ಳಿ ಹಾಕಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್‌) ಮೂಲಗಳು, ಆಂತರಿಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿವೆ. ಸುಳ್ಳು ಆರೋಪ ಮಾಡಿರುವ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಸಿಐಎಸ್‌ಎಫ್‌ ಮೇಲಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಪಾಸಣೆ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೃಷಾನಿ ಗಾಧ್ವಿ ಎಂಬ ಮಹಿಳಾ ಪ್ರಯಾಣಿಕರು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ನನಗೆ ಶರ್ಟ್ ತೆಗೆಯುವಂತೆ ಸೂಚಿಸಿದರು. ಸಿಬ್ಬಂದಿಯ ವರ್ತನೆಯಿಂದ ನನಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ. ಭದ್ರತಾ ತಪಾಸಣೆ ಕೇಂದ್ರದಲ್ಲಿ ನಿಂತು ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ವರ್ತನೆಗಳನ್ನು ಎದುರಿಸುವುದು ಅವಮಾನಕರ ಸಂಗತಿಯಾಗಿದೆ. ಭದ್ರತಾ ತಪಾಸಣೆ ವೇಳೆ ಮಹಿಳೆಯರು ಏಕೆ ಶರ್ಟ್ ತೆಗೆಯಬೇಕು’ ಎಂದು ಕೃಷಾನಿ ಗಾಧ್ವಿ ಟ್ವೀಟ್‌ ಮಾಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವಿಟರ್ ಖಾತೆಗೆ ಟ್ಯಾಗ್ ಸಹ ಮಾಡಿದ್ದಾರೆ.

‘ಕೃಷಾನಿ ಗಾಧ್ವಿ ಎಂಬ ಪ್ರಯಾಣಿಕರು ಬ್ಯಾಡ್ಜ್ ಮತ್ತು ಮಣಿಗಳನ್ನು ಹೊಂದಿರುವ ಡೆನಿಮ್ ಜಾಕೆಟ್ ಧರಿಸಿದ್ದರು. ಜಾಕೆಟ್ ಅನ್ನು ಸ್ಕ್ಯಾನರ್‌ನಲ್ಲಿ ಪರೀಕ್ಷಿಸುವ ಉದ್ದೇಶದಿಂದ ಸಿಐಎಸ್‌ಎಫ್‌ನ ಮಹಿಳಾ ಸಿಬ್ಬಂದಿ ಅವರನ್ನು ಪರದೆಯೊಳಗೆ ಕಳಿಸಿದ್ದಾರೆ. ಜಾಕೆಟ್ ತೆಗೆಯುವಂತೆ ಹೇಳಿದ್ದು ಅವರಿಗೆ ಅಸಮಾಧಾನ ಉಂಟು ಮಾಡಿದೆ. ಈ ಕುರಿತಂತೆ ಆರೋಪ ಮಾಡಿದ ಕೃಷಾನಿ ಗಾಧ್ವಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ಸಹ ನೀಡಿಲ್ಲ. ಅವರ ಟ್ವಿಟರ್ ಖಾತೆ ಡಿಲಿಟ್ ಆಗಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ ಸಿಐಎಸ್ಎಫ್‌ ವಿರುದ್ಧ ಸುಳ್ಳು ಆರೋಪ ಮಾಡಿದ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ’ ಸಿಐಎಸ್‌ಎಫ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.