ದೇವನಹಳ್ಳಿ: ರಾಜ್ಯದಾದ್ಯಂತ ಅನಧಿಕೃತ ಲಾಟರಿ–ಮಟ್ಕಾ ಮಾರಾಟ ನಿಷೇಧಿಸಲಾಗಿದ್ದು, ಜಿಲ್ಲೆಯಲ್ಲಿ ಅನಧಿಕೃತ ಲಾಟರಿ–ಮಟ್ಕಾ ಹಾವಳಿ ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಿಳಿಸಿದರು.
ಜಿಲ್ಲಾಡಳಿತ ಭವನದ ಬುಧವಾರ ನಡೆದ ಅನಧಿಕೃತ ಲಾಟರಿ, ಮಟ್ಕಾ ಹಾವಳಿಯ ನಿಯಂತ್ರಣದ ಬಗ್ಗೆ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರವು ಅನಧಿಕೃತವಾಗಿ ನಡೆಸುವ ಲಾಟರಿ ಹಾಗೂ ಮಟ್ಕಾ ದಂಧೆಯನ್ನು ರಾಜ್ಯದಾದ್ಯಂತ ಸಂಪೂರ್ಣವಾಗಿ ನಿಷೇಧಿಸಿದೆ. ಅನಧಿಕೃತವಾಗಿ ಲಾಟರಿ–ಮಟ್ಕಾ ದಂಧೆಯಲ್ಲಿ ತೊಡಗಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಲಾಟರಿ–ಮಟ್ಕಾ ಹಾವಳಿ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹಿಂದಿನ ಪ್ರಕರಣಗಳು ಕಂಡು ಬಂದ ಪ್ರದೇಶಗಳಲ್ಲಿ ಗಸ್ತು ಹೋಗಬೇಕು. ಕಾಲಕಾಲಕ್ಕೆ ಸಭೆ ನಡೆಸಿ ಲಾಟರಿ ಮಟ್ಕಾ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪೋಲಿಸ್ ಇಲಾಖೆಗೆ ಸೂಚಿಸಿದರು. 2025ನೇ ಸಾಲಿನಲ್ಲಿ ದೇವನಹಳ್ಳಿಯ ವಿಜಯಪುರದಲ್ಲಿ ಮಟ್ಕಾ ಹಾವಳಿಯ ಒಂದು ಪ್ರಕರಣ ಕಂಡುಬಂದಿತ್ತು ಎಂದರು.
ಅಕ್ರಮವಾಗಿ ಮಟ್ಕಾ ಜೂಜಾಟಕ್ಕೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳಲಾಗುತ್ತಿತ್ತು. ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಮರೇಶ್ ಗೌಡ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತ ಪ್ರಿಯದರ್ಶಿನಿ ಹಾಗೂ ಮುರಳಿ ಮೋಹನ್, ವಾಣಿಜ್ಯ ತೆರಿಗೆ ಜಾರಿ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಸತೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.