ದೇವನಹಳ್ಳಿ: ಇಲ್ಲಿನ ಪುರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಸೋಮವಾರ ಪುರಸಭೆ ಕಾರ್ಯಾಲಯದಲ್ಲಿ ಬಹುತೇಕ ಅಧಿಕಾರಿಗಳು ಕಣ್ಮರೆಯಾಗಿದ್ದರು. ಸಾರ್ವಜನಿಕರ ಭೇಟಿ ಸಮಯದಲ್ಲಿ ಅಧಿಕಾರಿಗಳ ಕುರ್ಚಿಗಳು ಖಾಲಿ ಖಾಲಿ ಕಂಡವು.
ನಕಲಿ ದಾಖಲೆ ಆಧಾರದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡನ ಹೆಸರಿನಲ್ಲಿ ಖಾತೆ ಮಾಡಿರುವ ವಿಚಾರವಾಗಿ ಜಮೀನು ಮಾಲೀಕರು ಲೋಕಾಯುಕ್ತರಿಗೆ ಜ.31ರಂದು ದೂರು ನೀಡಿದ್ದು, ಸೋಮವಾರ ಉಪಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನಲೆಯಲ್ಲಿ ಲೋಕಾಯುಕ್ತರು ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯಲ್ಲಿರು ಪುರಸಭೆ ಕಚೇರಿಗೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬಹುತೇಕ ಅಧಿಕಾರಿಗಳು ಮತ್ತು ಕಂದಾಯ ಸಿಬ್ಬಂದಿ ಸೋಮವಾರ ಸಂಜೆ ಸಾರ್ವಜನಿಕರ ಭೇಟಿ ಸಮಯದಲ್ಲಿಯೂ ಕಚೇರಿಯಲ್ಲಿ ಕಾಣ ಸಿಗಲಿಲ್ಲ. ಆದರೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿಲ್ಲ.
ಜ.19ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದರು. ಇದೇ ವೇಳೆಯಲ್ಲಿ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಕಚೇರಿಗೆ ಬೀಗ ಹಾಕಿ ಸಿಬ್ಬಂದಿ ನಾಪತ್ತೆಯಾಗಿದ್ದರು.
ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸುತ್ತದೆ ಎಂಬ ಸುಳಿವನ್ನು ಇಲ್ಲಿನ ಅಧಿಕಾರಿಗಳಿಗೆ ಯಾರು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.