ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭಟ್ರಮಾರೇನಹಳ್ಳಿ ಸಮೀಪದ ಕೈಗಾರಿಕಾ ವಲಯದಲ್ಲಿರುವ ಸರ್ಫನ್ ಎಚ್‌ಎಲ್ ಕಂಪನಿಯು ಸ್ಥಳೀಯರನ್ನು ಉದ್ಯೋಗದಿಂದ ತೆಗೆದು ಹಾಕಿದ್ದು, ವಜಾಗೊಂಡ ಕಾರ್ಮಿಕರು ಸೆಪ್ಟೆಂಬರ್ 22ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
‘ಬಂಡವಾಳಶಾಯಿಗಳು ನಮ್ಮ ಕೃಷಿ ಭೂಮಿ ಕಸಿದುಕೊಂಡು, ತಿಂಗಳ ಸಂಬಳಕ್ಕೆ ಜೀತಕ್ಕ ಇಟ್ಟಿಕೊಂಡಿದ್ದಾರೆ. ಈಗ ಕೆಲಸದಿಂದ ತೆಗೆದಿದ್ದು, ನಾವು ಎಲ್ಲಿಗೆ ಹೋಗೋದು, ಉಳುವೆ ಮಾಡುವ ಭೂಮಿಯೂ ಇಲ್ಲ ಕೆಲಸವೂ ಇಲ್ಲ ಬದುಕು ಸಾಗಿಸೋದು ಕಷ್ಟವಾಗಿದೆ‘ ಎಂದು ವಜಾಗೊಂಡಿರುವ ಕಾರ್ಮಿಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೈತ್ಯ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಯಲ್ಲಿ ದುಡಿಯುತ್ತಿದ್ದ ಬಡವರನ್ನು ಗುರಿಯಾಗಿಸಿಕೊಂಡು ಕೆಲಸದಿಂದ ವಜಾ ಮಾಡಲಾಗಿದೆ. ಹೊರ ರಾಜ್ಯದಿಂದ ಬಂದಿರುವ ಮುಖ್ಯಸ್ಥರು ಕಿರುಕುಳ ನೀಡಿದ್ದರೂ ಅದನ್ನು ಸಹಿಸಿಕೊಂಡು ಹೊಟ್ಟೆ ಪಾಡಿಗೆ ಜೀತ ಮಾಡುತ್ತಿರುವವರ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ. ಕೆಲಸದಿಂದ ವಜಾ ಮಾಡಿರುವವರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ದಸಂಸ ಮುಖಂಡ ಕಾರಳ್ಳಿ ಶ್ರೀನಿವಾಸ್ ಒತ್ತಾಯಿಸಿದರು.
ದೇವನಹಳ್ಳಿಯಲ್ಲಿ ಕಂಪನಿ ಆರಂಭ ಮಾಡುವ ಮುನ್ನ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ, ಇಲ್ಲಿ ಕೈಗಾರಿಕೆ ಸ್ಥಾಪನೆ ಆದ ನಂತರ ನೆಪ ಮಾತ್ರಕ್ಕೆ ಒಂದೆರೆಡು ವರ್ಷ ಕೆಲಸ ಕೊಟ್ಟು, ನಂತರ ಕೆಲಸದಿಂದ ವಜಾ ಮಾಡಿ ಬಡವರ ಕುಟುಂಬವನ್ನು ಬೀದಿ ಪಾಲು ಮಾಡುವ ಹುನ್ನಾರ ನಿಲ್ಲಿಸಬೇಕು ಎಂದು ಕೆ.ಆರ್.ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವೆಂಕಟೇಶ್‌ಮೂರ್ತಿ ಆಗ್ರಹಿಸಿದರು.
ಹೋರಾಟಗಾರ ರಾಯಸಂದ್ರ ಸೋಮು, ವಿಜಯಪುರ ತೇಜಾ ಶ್ರೀನಿವಾಸ್,ನಿಖಿಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.