ADVERTISEMENT

‘ಗ್ಯಾರಂಟಿ’ ನಕಲು ಮಾಡಿದ ಬಿಜೆಪಿ: ಡಿ.ಕೆ. ಶಿವಕುಮಾರ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:00 IST
Last Updated 21 ಜುಲೈ 2025, 2:00 IST
ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಡಿಸಿಎಂ ಡಿಕೆಶಿ ಚಾಲನೆ ನೀಡಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಪ್ರಿಯಾಂಕಾ ಖರ್ಗೆ ಹಾಗೂ ಶಾಸಕ ಶರತ್‌ ಬಚ್ಚೇಗೌಡ ವೇದಿಕೆಯಲ್ಲಿದ್ದರು
ಹೊಸಕೋಟೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಡಿಸಿಎಂ ಡಿಕೆಶಿ ಚಾಲನೆ ನೀಡಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಪ್ರಿಯಾಂಕಾ ಖರ್ಗೆ ಹಾಗೂ ಶಾಸಕ ಶರತ್‌ ಬಚ್ಚೇಗೌಡ ವೇದಿಕೆಯಲ್ಲಿದ್ದರು   

ಹೊಸಕೋಟೆ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯೇ ಇಂದು ಅದನ್ನು ಅನುಸರಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇ-ಸ್ವತ್ತು, ಹಕ್ಕುಪತ್ರ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

6ನೇ ಗ್ಯಾರಂಟಿಯಾಗಿ ಆಸ್ತಿಹಕ್ಕು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 1.11 ಕೋಟಿ ಹಕ್ಕುಪತ್ರ ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದಾದ್ಯಂತ ತಾಂಡಾ, ಗಿರಿಜನ ಪ್ರದೇಶ ಸೇರಿದಂತೆ ಹಲವರು ಪ್ರದೇಶಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಇ–ಸ್ವತ್ತು ನೀಡುವ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಮಾಡುತ್ತಿದೆ ಎಂದರು.

2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ, ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮೆಟ್ರೊ, ಎತ್ತಿನಹೊಳೆ ಯೋಜನೆ ಆದಷ್ಟು ಬೇಗ ಬರಲಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಆಶಿಸಿದರು.

ರಾಜ್ಯದಾದ್ಯಂತ ಮಾದರಿ ತಾಲ್ಲೂಕು ಪಂಚಾಯಿತಿ ಯೋಜನೆ ಜಾರಿಗೆ ತರಲಾಗಿದ್ದು ಹೊಸಕೋಟೆಯಲ್ಲಿ ಮೊದಲ ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಿಸಲಾಗುವುದು. ಗ್ರಾಮೀಣಾಭಿವೃದ್ಧಿ ಇಲಾಖೆ, ಐ.ಟಿ ಇಲಾಖೆ ದೇಶದಲ್ಲಿಯೇ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ  ಎಂದು ಗ್ರಾಮೀಣಾಭಿವೃದ್ದಿ
ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ
ಹೇಳಿದರು. 

ವಿರೋದ ಪಕ್ಷಗಳ ವಿರೋಧಕ್ಕೆ ಮಣಿಯದೆ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದಲ್ಲಿ ಯಾರೂ ಜಾರಿಗೆ ತಂದಿಲ್ಲ. ನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳು ಸೃಜಿಸಿ, ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಗಳನ್ನು ನಿರ್ಮಿಸಿದ್ದು. ಅಲ್ಲಿ 50000 ಮಕ್ಕಳು ಕಲಿಯುತ್ತಿದ್ದಾರೆ ಎಂದು ಹೇಳಿದರು.

ಸರ್ವರಿಗೂ ಸಮಾನ ಅವಕಾಶ ಎಂಬ ಧ್ಯೇಯದೊಂದಿಗೆ ಎಲ್ಲಾ ವರ್ಗದವರಿಗೂ ಸೌಲಭ್ಯ ನೀಡುವ ಜೊತೆಗೆ ಕಾಂಗ್ರೆಸ್ ಸರ್ಕಾರ ನವಕರ್ನಾಟಕ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಪ್ರತಿ ಕುಟುಂಬ ಪ್ರತಿ ತಿಂಗಳು ₹5ರಿಂದ ₹6 ಸಾವಿರ ಉಳಿತಾಯ ಮಾಡುತ್ತಿದೆ ಎಂದರು.

ಹೊಸಕೋಟೆಗೆ ಮೆಟ್ರೊ ಸಂಪರ್ಕ ಹಾಗೂ ಕಾವೇರಿ ನೀರು ಪೂರೈಕೆ, ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಾಣ ಮಾಡುವಂತೆ ಶಾಸಕ ಶರತ್ ಬಚ್ಚೇಗೌಡ, ಸಚಿವರಿಗೆ ಮನವಿ ಸಲ್ಲಿಸಿದರು.

60 ಗ್ರಾಮಗಳು ಇ-ಸ್ವತ್ತು ಮುಕ್ತ ಎಂದು ಘೋಷಿಸಿದ್ದು 6000 ಇ–ಸ್ವತ್ತುನ್ನು ನೀಡಲಾಗುತ್ತಿದೆ. ಫಲಾನುಭವಿಗಳಿಗೆ 1,010 ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಶಾಸಕರಾದ ಶ್ರೀನಿವಾಸ್, ರವಿ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ,
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು.
ಹೊಸಕೋಟೆಗೂ ಮೆಟ್ರೊ: ಡಿಕೆಶಿ
ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹೊಸಕೋಟೆಯಲ್ಲಿ ಉದ್ಭವಿಸಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶೀಘ್ರ ಮೆಟ್ರೊ ಸಂಪರ್ಕ ಕಲ್ಪಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು. ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಹೊಸಕೋಟೆಗೆ ಮೆಟ್ರೊ ಸಂಪರ್ಕ ಕಲ್ಪಿಸಲು ಶೀಘ್ರ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.  ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ದೇವನಹಳ್ಳಿ ದೊಡ್ಡಬಳ್ಳಾಪುರ ನೆಲಮಂಗಲ ತಾಲ್ಲೂಕುಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.