ADVERTISEMENT

ದೊಡ್ಡಬಳ್ಳಾಪುರ: ಗಣೇಶಮೂರ್ತಿ ನೋಡಲು ತೆರಳಿದ್ದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:49 IST
Last Updated 9 ಸೆಪ್ಟೆಂಬರ್ 2024, 15:49 IST
ಚೇತನ
ಚೇತನ   

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವೀಕ್ಷಣೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚೇತನ(13) ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಕೊನಘಟ್ಟ ಗ್ರಾಮದ ಶ್ರೀನಿವಾಸ್ ಅವರ ಪುತ್ರಿ ಚೇತನ ಮನೆ ಸಮೀಪ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ನೋಡಲು ಭಾನುವಾರ ಬೆಳಗ್ಗೆ ತೆರಳಿದ್ದಾಗ ಗಣೇಶಮೂರ್ತಿಯ ಸಮೀಪದಲ್ಲಿದ್ದ ವಿದ್ಯುತ್‌ ತಂತಿ ಸ್ಪರ್ಶದಿಂದ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಾಧೀಕ್‌ಪಾಷ ತಿಳಿಸಿದ್ದಾರೆ.

ಹಬ್ಬದ ಪ್ರಾರಂಭಕ್ಕೂ ಮುನ್ನ ಪೊಲೀಸ್‌ ಇಲಾಖೆಯಿಂದ ಹಲವಾರು ಬಾರಿ ಶಾಂತಿ ಸಭೆಗಳನ್ನು ನಡೆಸಿ ಕಾನೂನು ಪಾಲನೆ, ಮುಂಜಾಗ್ರತಾವಾಗಿ ವಹಿಸಬೇಕಿರುವ ಎಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಗಿತ್ತು. ಆದರೂ ಸಹ ವಿದ್ಯುತ್‌ ಸ್ಪರ್ಶದಿಂದ ಬಾಲಕಿ ಮೃತಪಟ್ಟಿರುವುದು ಬೇಸರದ ಸಂಗತಿ. ಈ ಬಗ್ಗೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ವರದಿಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ADVERTISEMENT

ಅನುಮತಿ ಪಡೆದಿಲ್ಲ:  ವಿದ್ಯುತ್‌ ಅವಘಡ ಸಂಭವಿಸಿರುವ ಸ್ಥಳದಲ್ಲಿ ಗಣೇಶನಮೂರ್ತಿ ಪ್ರತಿಷ್ಟಾಪನೆಗೆ ಬೆಸ್ಕಾಂನಿಂದ ಅನುಮತಿ ಪಡೆದಿರಲಿಲ್ಲ. ಪೊಲೀಸ್‌ ಇಲಾಖೆ ವತಿಯಿಂದ ಮೃತ ಬಾಲಕೀಯ ಮರಣೋತ್ತರ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಪಿ.ವಿನಯ್‌ಕುಮಾರ್‌ ತಿಳಿಸಿದ್ದಾರೆ.

ನಿಯಮ ಪಾಲನೆಯೇ ವಿರಳ

ಗಣೇಶನ ಹಬ್ಬಕ್ಕೂ ಮುನ್ನ ನಡೆದ ಸಾರ್ವಜನಿಕ ಸಭೆಗಳಲ್ಲಿ ಗಣೇಶಮೂರ್ತಿ ಮೆರವಣಿಗೆಯ ವೇಳೆ ಡಿಜೆ ಬಳಸಬಾರದು ರಾತ್ರಿ 8 ಗಂಟೆ ಒಳಗೆ ಗಣೇಶನಮೂರ್ತಿಗಳ ವಿಸರ್ಜನೆ ಮುಕ್ತಾಯಗೊಳಿಸಬೇಕು. ರಾತ್ರಿ ಹೆಚ್ಚಿನ ಸಮಯದವರೆಗೆ ಧ್ವನಿ ವರ್ಧಕ ಬಳಸಬಾರದು ಎನ್ನುವ ನಿಯಮಗಳ ಬಗ್ಗೆ ಹೇಳಲಾಗಿತ್ತು. ಆದರೆ ಈ ನಿಯಮಗಳು ಎಲ್ಲೂ ಪಾಲನೆಯೇ ಆಗುತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.

ಗ್ರಾಮೀಣ ಹಾಗೂ ನಗರದಲ್ಲಿನ ವಾರ್ಡ್‌ ಬೀಟ್‌ ಪೊಲೀಸರು ಈ ಬಗ್ಗೆ ಸೂಕ್ತ ನಿಗಾವಹಿಸಿ ಕ್ರಮ ಕೈಗೊಂಡು ಶಾಂತಿ ಸಭೆಯಲ್ಲಿ ತಿಳಿಸಲಾಗಿರುವ ಕಾನೂನು ಪಾಲನೆ ಮಾಡದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೊನಘಟ್ಟದಲ್ಲಿ ನಡೆದಂತಹ ಹಾಗೂ ಆರು ವರ್ಷಗಳ ಹಿಂದೆ ಕನಸವಾಡಿಯಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ವಿದ್ಯುತ್‌ ಸ್ಪರ್ಶಿಸಿ ಐದು ಜನ ಮೃತಪಟ್ಟಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಬೀಟ್‌ ಪೊಲೀಸರು ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.