ದೊಡ್ಡಬಳ್ಳಾಪುರ: ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕ ಸ್ಥಾನಕ್ಕೆ ಮೇ 25 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೇ 17 ಕೊನೆಯ ದಿನವಾಗಿದೆ. ತಾಲ್ಲೂಕಿನಿಂದ ಇಲ್ಲಿಯವರೆಗೆ ಬಿ.ಸಿ.ಆನಂದಕುಮಾರ್, ಹಾಡೋನಹಳ್ಳಿ ನಾರಾಯಣಪ್ಪ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ. ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 201 ಜನ ಹೊಂದಿದ್ದಾರೆ. ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಪ್ರಸ್ತುತ ಬಮೂಲ್ ನಿರ್ದೇಶಕರಾಗಿರುವ ಬಿ.ಸಿ.ಆನಂದಕುಮಾರ್ ಅವರು ಎರಡನೇ ಬಾರಿಗೆ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಲು ಶುಕ್ರವಾರ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್, ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಹಾಗೂ ಸ್ಥಳೀಯ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಹಾಗೂ ನೌಕರರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಡೋನಹಳ್ಳಿ ನಾರಾಯಣಪ್ಪ ಅವರು ಇದೇ ಮೊದಲ ಬಾರಿಗೆ ನಾಮ ಪತ್ರ ಸಲ್ಲಿಸಿದ್ದಾರೆ.
ನಾಮ ಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿದ್ದರು ಇನ್ನೂ ಕಾಂಗ್ರೆಸ್ ಪಕ್ಷ ಬೆಂಬಲಿ ಅಭ್ಯರ್ಥಿಯಾಗಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಯಾರು ನಾಮ ಪತ್ರ ಸಲ್ಲಿಸಲಿದ್ದಾರೆ ಎನ್ನುವುದು ಅಧಿಕೃತ ಘೋಷಣೆಯಾಗಿಲ್ಲ. ಸದ್ಯದ ಮಟ್ಟಿಗೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರ ಸಹೋದರ ರಾಮಣ್ಣ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಇನ್ನೂ ಯಾರೊಬ್ಬರು ಸಹ ನಾಮಪತ್ರ ಸಲ್ಲಿಸಿಲ್ಲ.
ನಾಮತ್ರಗಳ ಸಲ್ಲಿಕೆ ಅಂತಿಮಗೊಂಡ ನಂತರ ಯಾರ ನಡುವೆ ನೇರೆ ಸ್ಪರ್ಧೆ ನಡೆಯಲಿದೆ ಎನ್ನುವ ಮಾಹಿತಿ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.