ದೊಡ್ಡಬಳ್ಳಾಪುರ: ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿ.ಸಿ.ಆನಂದಕುಮಾರ್ ಅವರು, ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿರುವುದು ಅಕ್ಷಮ್ಯ. ಅಂತೆಯೇ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕುರಿತು ಮಾತನಾಡಿರುವ ಭಾಷೆ ಖಂಡನೀಯ. ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಎಸ್‌ಸಿ, ಎಸ್‌ಟಿ ಘಟಕದಿಂದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಬಿ.ಸಿ.ಆನಂದಕುಮಾರ್ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ನಿಂದಿಸಿದ್ದಾರೆ. ಚುನಾವಣೆಯಲ್ಲಿ ಸೋಲು–ಗೆಲುವು ಸಹಜ. ಹಾಗೆಂದ ಮಾತ್ರಕ್ಕೆ ಏನಾದರೂ ಮಾತನಾಡಬಹುದು ಎನ್ನುವುದು ತಪ್ಪು. ಮಾಜಿ ಶಾಸಕರನ್ನು ತೆಗಳಿ, ನಂತರ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿ ಬಂದಿದ್ದಾರೆ. ಈ ದ್ವಂದ್ವ ನಿಲುವಿನಿಂದ ಅವರು ಯಾವ ಪಕ್ಷದಲ್ಲಿದ್ದಾರೆ ಎಂದು ತಿಳಿಸಬೇಕಿದೆ ಎಂದರು.
ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್ ಅಭ್ಯರ್ಥಿಗೆ ಬೇಷರತ್ ಬೆಂಬಲ ನೀಡಲಾಗಿತ್ತು. ಆದರೆ ನಮ್ಮ ಬೆಂಬಲಿತ ಅಭ್ಯರ್ಥಿ ಸೋಲುಂಡಿದ್ದಾರೆ. ಚುಣಾವಣೆಯಲ್ಲಿ ಸೋಲು ಗೆಲುವು ಸಹಜ. ರಾಜಕೀಯದಲ್ಲಿ ಕನಿಷ್ಠ ಸೌಜನ್ಯವಾಗಿ ವರ್ತಿಸದೇ ಬಮೂಲ್ ನಿರ್ದೇಶಕರು ಏಕವಚನ ಬಳಸಿರುವುದು ಶೋಭೆಯಲ್ಲ. ರಾಜಕೀಯದಲ್ಲಿ ವೈಯಕ್ತಿಕ ಧ್ವೇಷ ಬೇಡ. ಮಾತನಾಡುವಾಗ ಭಾಷೆ ಹಿಡತದಲ್ಲಿರಲಿ ಎಂದು ಹೇಳಿದರು.
ಕಾಂಗ್ರೆಸ್ ಎಸ್.ಸಿ ಘಟಕದ ತಾಲ್ಲೂಕು ಅಧ್ಯಕ್ಷ ಕೆಂಪಣ್ಣ, ನಗರ ಅಧ್ಯಕ್ಷ ಮುನಿರಾಜು ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಾ ಈಗ ಪ್ರಿಯಾಂಕ್ ಖರ್ಗೆ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಬೇಸರದ ಸಂಗತಿ. ಈ ಬಗ್ಗೆ ಅವರು ಕ್ಷಮೆ ಯಾಚಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ನಗರಸಭಾ ಸದಸ್ಯ ಶಿವಣ್ಣ,ಕಾಂಗ್ರೆಸ್ ಕಸಬಾ ಘಟಕದ ಅಧ್ಯಕ್ಷ ಅಪ್ಪಿವೆಂಕಟೇಶ್, ಮುಖಂಡರಾದ ಕೆ.ಎಂ. ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.