ದೊಡ್ಡಬಳ್ಳಾಪುರ: ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಇಲ್ಲದೆ ಇರುವುದು ಒಂದೆಡೆಯಾದರೆ, ಇರುವ ಶೌಚಾಲಯಗಳಲ್ಲಿ ಗಲೀಜು ತಾಂಡವವಾಡುತ್ತಿದ್ದು, ಸ್ವಚ್ಛ ಶೌಚಾಲಯ ನಗರದ ಜನತೆ ಮರಿಚ್ಚೀಕೆಯಾಗಿದೆ.
ನಗರದ ಜನ ಸಂಖ್ಯೆ ಈಗ 1.10 ಲಕ್ಷಕ್ಕೆ ಮುಟ್ಟಿದೆ ಎಂದು ನಗರಸಭೆ ಅಂದಾಜಿಸಿದೆ. ಇದಲ್ಲದೆ ನಗರದ ಕೂಗಳತೆ ದೂರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಪ್ರತಿ ದಿನ ಕೆಲಸಕ್ಕೆ ಬಂದು ಹೋಗುವ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ನಗರಕ್ಕೆ ಬಂದು ಹೋಗುತ್ತಾರೆ. ಆದರೆ ಸುಸಜ್ಜಿತವಾದ ಒಂದು ಸಾರ್ವಜನಿಕ ಶೌಚಾಲಯ, ಸ್ನಾನಗೃಹ ಇಲ್ಲ. ಇದರಿಂದ ಸಾರ್ವಜನಿಕರು ಮತ್ತು ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.
‘ಸ್ವಚ್ಛ ಭಾರತ’ ಎಂಬುದು ಹೆಸರಿಗೆ ಸೀಮಿತವಾಗಿದೆ. ನಗರದ ಸ್ಥಳೀಯ ಆಡಳಿತ, ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರು ಈ ಬಗ್ಗೆ ಇಚ್ಛಾಸಕ್ತಿ ತೋರುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ನಗರದ ಹಳೇ ಬಸ್ ನಿಲ್ದಾಣದ ಸುತ್ತಲು ಮೂರು ಸಾರ್ವಜನಿಕ ಶೌಚಾಲಯಗಳಿವೆ. ಆದರೆ ಒಂದೊಂದು ಶೌಚಾಲಯಗಳ ಸ್ಥಿತಿಯನ್ನು ನೋಡಿದರೆ ಒಮ್ಮೆ ಇಲ್ಲಿಗೆ ಹೋಗಿ ಬಂದವರು ಮತ್ತೆಂದೂ ಇಲ್ಲಿಗೆ ಹೋಗಲು ಮನಸ್ಸು ಮಾಡುವುದಿಲ್ಲ. ತುರ್ತು ಸಂದರ್ಭದಲ್ಲಿ ಇಲ್ಲಿನ ಶೌಚಾಲಯಗಳಿಗೆ ಹೋಗಿ ಬಂದರೆ ರೋಗಗಳು ಹರಡುವ ಭೀತಿ ತಪ್ಪಿದ್ದಲ್ಲ ಎನ್ನುತ್ತಾರೆ ಸಾರ್ವಜನಿಕರು.
ನಗರದ ರೈಲ್ವೆ ನಿಲ್ದಾಣ ವೃತ್ತ, ಡಿ.ಕ್ರಾಸ್, ಪ್ರವಾಸಿ ಮಂದಿರ ವೃತ್ತ, ತಾಲ್ಲೂಕು ಕಚೇರಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಇರುವ ಶೌಚಾಲಯಗಳಲ್ಲಿಯೂ ಕನಿಷ್ಠ ಸ್ವಚ್ಛತೆ ಮತ್ತು ಕನಿಷ್ಠ ಸೌಲಭ್ಯಗಳು ಇಲ್ಲ.
ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳಿಗೆ ಹೊರಗಿನಿಂದ ಬರುವ ಪ್ರಯಾಣಿಕರು ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ ಸ್ನಾನ ಮಾಡುವ ಅನಿರ್ವಾಯತೆ ಇರುತ್ತದೆ. ಆದರೆ ಇಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆಯೇ ಇಲ್ಲ. ಶೌಚಕ್ಕೆ ಹೋಗಲು ಅಸಹ್ಯ ಪಟ್ಟಿಕೊಳ್ಳುವಾಗ ಸ್ನಾನ ಮಾಡಲು ಹೇಗೆ ಸಾಧ್ಯ?–ಪ್ರಕಾಶ್ ಡಿ.ಕ್ರಾಸ್ ನಿವಾಸಿ
ಸ್ವಚ್ಛ ಭಾರತ್ ಯೋಜನೆಯಲ್ಲಿ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಆರ್ಥಿಕ ನೆರವು ಬರುತ್ತಿದೆ. ಆದರೆ ಇದರ ಸದ್ಬಳಕೆ ಮಾಡಿಕೊಂಡು ಹೈಟೆಕ್ ಶೌಚಾಲಯ ಇರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ತುರ್ತು ಅಗತ್ಯವಿದೆ.–ಮನೋಜ್‌ಕುಮಾರ್, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.