ದೊಡ್ಡಬಳ್ಳಾಪುರ: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವುದನ್ನು ಖಂಡಿಸಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ನೇತೃತ್ವದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಂದ ವಿಷ್ಣುವರ್ಧನ್ ಪುತ್ಥಳಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಮಧ್ಯ ಪ್ರವೇಶಿಸಿ ಸ್ಮಾರಕವನ್ನು ಸಂರಕ್ಷಿಸುವಂತೆ ಒತ್ತಾಯಿಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಚಲನಚಿತ್ರ ಲೋಕದಲ್ಲಿ ಜನಮನ ಗೆದ್ದ ಹೆಸರಾಂತ ಕನ್ನಡದ ಶ್ರೇಷ್ಠ ನಟ, ಸಂಸ್ಕೃತಿ ಪ್ರೇಮಿಯಾಗಿದ್ದ ವಿಷ್ಣುವರ್ದನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಕನ್ನಡ ನಾಡು ಮರೆಯಲು ಸಾಧ್ಯವಿಲ್ಲ. ಇತ್ತೀಚೆಗೆ ವಿಷ್ಣುವರ್ಧನ್ ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಭಾರಿ ನೋವು ತಂದಿದೆ ಎಂದು ಡಾ.ವಿಷ್ಣುವರ್ಧನ್ ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಗಂಗರಾಜ, ಕಾರ್ಯದರ್ಶಿ ಶಿವಕುಮಾರ್, ಸಹಕಾರ್ಯದರ್ಶಿ ರಾಮಾಂಜಿನಪ್ಪ ಬೇಸರಿಸಿದರು.
ಸರ್ಕಾರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಲಿ ಸಹ ಈ ಬಗ್ಗೆ ಗಂಭೀರವಾಗಿ ಗಮನ ಹರಿಸದಿರುವುದು ಖಂಡನೀಯ. ವಿಷ್ಣುವರ್ದನ್ ಅವರ ಸಮಾಧಿಯನ್ನು ಮರು ನಿರ್ಮಾಣ ಮಾಡಬೇಕು. ಇದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಯ ಕೇಂದ್ರ ರೂಪಿಸಬೇಕು. ಕಲೆಯ ಪ್ರದರ್ಶನ ಮತ್ತು ತರಬೇತಿಯ ಕಲಾ ಗ್ರಾಮ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸದರಿ ಭೂಮಿಯನ್ನು ತಕ್ಷಣವೆ ಸ್ವಾಧೀನ ಪಡಿಸಿಕೊಂಡು ಭೂಮಾಲೀಕರಿಗೆ ಸರ್ಕಾರದ ನಿಯಾಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.
ವಿಷ್ಣುವರ್ದನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸೇವೆ ಅನುಪಮವಾಗಿದೆ. ಅವರ ಸ್ಮಾರಕವನ್ನು ಉಳಿಸುವಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ನಗರಸಭೆಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ನಗರಸಭೆ ಸದಸ್ಯ ಆನಂದ್, ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಗೌರವ ಅಧ್ಯಕ್ಷ ಭಾರ್ಗವ, ನಾಗೇಶ್, ಮುನಿಆಂಜಿನಪ್ಪ, ಗಣೇಶ್, ರವಿಕುಮಾರ್, ಗಂಗಾಧರ್, ಸೋಮುವಿಶ್ವಕರ್ಮ, ಎಚ್.ಎಸ್.ಅಗ್ನಿ ವೆಂಕಟೇಶ್, ಗೌರಿಶಂಕರ್, ಶಂಕರ್, ನಾರಾಯಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.