ADVERTISEMENT

ದೊಡ್ಡಬಳ್ಳಾಪುರ | ಚರಂಡಿಯಲ್ಲಿ ತ್ಯಾಜ್ಯ: ಗುಬ್ಬುನಾತ

ತ್ಯಾಜ್ಯ ತೆರವು, ಚರಂಡಿ ಸ್ವಚ್ಛತೆಗೆ ಆಗ್ರಹ । ಮಳೆ ಬಂದರೆ ರಸ್ತೆಯಲ್ಲಿ ಹರಿವ ಕೊಳೆಚೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:57 IST
Last Updated 5 ಮೇ 2025, 13:57 IST
ದೊಡ್ಡಬಳ್ಳಾಪುರ ನಗರದ ರಸ್ತೆ ಬದಿ ಸುರಿದಿರುವ ತ್ಯಾಜ್ಯ ತಿನ್ನುತ್ತಿರುವ ಹಸುಗಳು
ದೊಡ್ಡಬಳ್ಳಾಪುರ ನಗರದ ರಸ್ತೆ ಬದಿ ಸುರಿದಿರುವ ತ್ಯಾಜ್ಯ ತಿನ್ನುತ್ತಿರುವ ಹಸುಗಳು   

ದೊಡ್ಡಬಳ್ಳಾಪುರ: ತಾಲ್ಲೂಕು ಮತ್ತು ನಗರ ಪ್ರದೇಶಗಳಲ್ಲಿ ರಸ್ತೆ ಬದಿ ಮತ್ತು ಚರಂಡಿಗಳಲ್ಲಿ ತ್ಯಾಜ್ಯ ಸುರಿಯುವುದು ಸಾಮಾನ್ಯವಾಗಿದ್ದು, ಗಲೀಜು ತಾಂಡವವಾಡುತ್ತಿದೆ. ಕಸದ ರಾಶಿ ಮತ್ತು ಚರಂಡಿಯಲ್ಲಿ ತ್ಯಾಜ್ಯ ತೆರವುಗೊಳಿಸದೆ ಕೊಳಚೆ ನೀರು ಸರಾಗವಾಗಿ ಹರಿಯದೆ, ಗಬ್ಬು ನಾರುತ್ತಿದೆ. ಮಳೆ ಬಂದರೆ ರಸ್ತೆ ಮೇಲೆ ಚರಂಡಿ ಹರಿಯುತ್ತಿದೆ.

ತಾಲ್ಲೂಕಿನಲ್ಲಿ ವಾಡಿಕೆಯಂತೆಯೆ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಏಪ್ರಿಲ್‌ ನಿಂದ ಇಲ್ಲಿಯವರೆಗೂ ಹದವಾಗಿ ಮಳೆ ಬೀಳುತ್ತಲೇ ಇದೆ. ಆದರೆ ನಗರಸಭೆ ವ್ಯಾಪ್ರಿಯಲ್ಲಿ ಪ್ರತಿ ವರ್ಷವು ಹೆಚ್ಚು ಮಳೆ ನೀರು ಹರಿಯುವ ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಲ್ಲ. ಹೀಗಾಗಿ ತಾಲ್ಲೂಕು ಕಚೇರಿ, ಭಗತ್‌ಸಿಂಗ್‌ ಕ್ರೀಡಾಂಗಣ ರಸ್ತೆ, ತೇರಿಬೀದಿ ರಸ್ತೆ, ಖಾಸ್‌ಬಾಗ್‌, ಡಿ.ಕ್ರಾಸ್‌ ಸೇರಿದಂತೆ ತಗ್ಗು ಪ್ರದೇಶದ ರಸ್ತೆಗಳಲ್ಲಿ ಕೊಚ್ಚೆ ನೀರು ಹರಿಯುತ್ತಿದೆ.

ನಗರದಲ್ಲಿ ಮಳೆ ಬಂದರೆ ಚರಂಡಿಗಳಲ್ಲಿ ನೀರು ಹರಿಯದೇ ರಸ್ತೆಯಲ್ಲಿ ಹರಿಯುವುದು ಸಾಮಾನ್ಯವಾಗಿದೆ. ಚರಂಡಿಗಳಲ್ಲಿ, ಪ್ಲಾಸ್ಟಿಕ್‌ ತ್ಯಾಜ್ಯ, ಬಾಟಲ್‌, ಕಕಡ್ಡಿಗಳನ್ನು ಮಳೆಗಾಲ ಆರಂಭಕ್ಕೆ ಮುನ್ನ ಸ್ವಚ್ಛಗೊಳಿಸದೆ ನಗರಸಭೆ ಮತ್ತು ಪಂಚಾಯಿತಿಗಳು ನಿರ್ಲಕ್ಷ್ಯವಹಿಸುವ ಸಾರ್ವಜನಿಕರು ಆರೋಪಿಸಿದ್ದಾರೆ.

ADVERTISEMENT

ಸ್ವಚ್ಛವಾಗದ ರಸ್ತೆಗಳು: ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗದಲ್ಲಿ ಕಸದ ರಾಶಿ ಹಾಕುವುದರಿಂದ ಮಳೆ ಬಂದಾಗ ಚರಂಡಿಯಲ್ಲಿ ಸಿಲುಕಿ ನೀರು ಹರಿಯದೇ ರಸ್ತೆಗೆ ಹರಿಯುತ್ತಿವೆ. ರಸ್ತೆಗಳ ಬದಿ ಕಸ ಹಾಕದಂತೆ ನಗರಸಭೆ ಮಾರ್ಷಲ್‌ಗಳ ಬೀಟ್‌ ವ್ಯವಸ್ಥೆಯನ್ನು ಶೀಘ್ರವಾಗಿ ಜಾರಿಗೆ ತರಬೇಕಿದೆ.

ಮಳೆಗಾಲದಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು ಡೆಂಗಿ, ಚಿಕೂನ್‌ ಗುನ್ಯಾ ಹರಡುವ ಸಂಭವ ಹೆಚ್ಚಿರುವುದರಿಂದ ಮಳೆಗಾಲದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ದ್ರಾವಣ ಅಥವಾ ಡಿಡಿಟಿ ಸಿಂಪಡಿಸಬೇಕು. ಸೊಳ್ಳೆಗಳು ಹೆಚ್ಚಾಗದಂತೆ ಕ್ರಿಮಿ ನಾಶಕ ಹೊಗೆ ಹಾಕಬೇಕು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಈ ಕೆಲಸವನ್ನು ನಗರಸಭೆ ಶೀಘ್ರವಾಗಿ ಕೈಗೊಳ್ಳಬೇಕು ಎನ್ನುತ್ತಾರೆ ತೇರಿನಬೀದಿ ನಿವಾಸಿ ಮನೋಜ್‌ಕುಮಾರ್‌.

ದೊಡ್ಡಬಳ್ಳಾಪುರದ ತೇರಿನ ಬೀದಿ ಮುಖ್ಯರಸ್ತೆಯ ಚರಂಡಿಯಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳು

ನಾಗರಿಕಗೂ ಜವಾಬ್ದಾರಿ ಇದೆ

ನಗರಕ್ಕೆ ಹೊಂದಿಕೊಂಡ ರಾಜಕಾಲುವೆ ಸ್ವಚ್ಛ ಮಾಡಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದೂರುಗಳು ಬಂದ ಕಡೆ ಆದ್ಯತೆ ಮೇರೆಗೆ ಚರಂಡಿಗಳ ಸ್ವಚ್ಛತೆಗೆ ಗಮನ ನೀಡಿ ಸ್ವಚ್ಛಗೊಳಿಸಲು ಕ್ರಮ ವಹಿಸಲಾಗುವುದು. ಸೊಳ್ಳೆಗಳ ನಾಶಕ್ಕೆ ದ್ರಾವಣ ಸಿಂಪಡಿಸುವುದು ಸೇರಿದಂತೆ ನಗರಸಭೆಯ ವತಿಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ನಾಗರಿಕರು ಮನೆ ಕಸ ಹಾಗೂ ಪ್ಲಾಸ್ಟಿಕ್‌ ತಾಜ್ಯವನ್ನು ಯಾವುದೇ ಕಾರಣಕ್ಕೂ ಚರಂಡಿಗಳಿಗೆ ಹಾಕಬಾರದು. ಯಾವುದೇ ತ್ಯಾಜ್ಯವಾಗಲೀ ವೈಜ್ಞಾನಿಕವಾಗಿ ವಿಂಗಡಿಸಿ ಮನೆ ಬಳಿಗೆ ಬರುವ ನಗರಸಭೆ ಪೌರಕಾರ್ಮಿಕರಿಗೆ ನೀಡಬೇಕು. ಸ್ವಚ್ಛತೆಗೆ ನಗರಸಭೆಯೊಂದಿಗೆ ನಾಗರಿಕರ ಜವಾಬ್ದಾರಿ ಸಹ ಇದೆ ಎನ್ನುತ್ತಾರೆ ನಗರಸಭೆ ಪರಿಸರ ವಿಭಾಗದ ಸಹಾಯಕ ಎಂಜಿನಿಯರ್‌ ಈರಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.