ADVERTISEMENT

ದೊಡ್ಡಬಳ್ಳಾಪುರ: ಡಾ.ರಾಜ್‌ ಕನ್ನಡದ ಅಸ್ಮಿತೆ

ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:39 IST
Last Updated 1 ಡಿಸೆಂಬರ್ 2025, 4:39 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ  ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ-2025 ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಕೆ.ಪಿ.ಲಕ್ಷ್ಮೀನಾರಾಯಣ್ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ  ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ-2025 ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಕೆ.ಪಿ.ಲಕ್ಷ್ಮೀನಾರಾಯಣ್ ಮಾತನಾಡಿದರು   

ದೊಡ್ಡಬಳ್ಳಾಪುರ: ಡಾ.ರಾಜಕುಮಾರ್ ಅವರು ಕನ್ನಡ ಮತ್ತು ಕರ್ನಾಟಕದ ಅಸ್ಮಿತೆಯಾಗಿದ್ದಾರೆ. ಅವರು ಕನ್ನಡ ಚಲನಚಿತ್ರ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಲೆಕ್ಕಪರಿಶೋಧಕ ಕೆ.ಪಿ.ಲಕ್ಷ್ಮೀನಾರಾಯಣ್ ಹೇಳಿದರು.

ತಾಲ್ಲೂಕಿನ ಚನ್ನವೀರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ-2025 ಕಾರ್ಯಕ್ರಮದಲ್ಲಿ ‘ಡಾ.ರಾಜಕುಮಾರ್ ಮತ್ತು ಕನ್ನಡ’ ಕುರಿತು ಮಾತನಾಡಿದರು.

ಕನ್ನಡ ಉಚ್ಚಾರಣೆ ಮಧುರ‌ ಮತ್ತು ಸ್ಪಷ್ಟತೆ ಅರಿಯಬೇಕಿದ್ದರೆ ರಾಜಕುಮಾರ್‌ ಅವರ ಮಾತುಗಳನ್ನು ಕೇಳಬೇಕು. ಉತ್ತಮ ಕನ್ನಡ ಹೇಗಿರಬೇಕೆಂದರೆ‌ ರಾಜಕುಮಾರ್ ಅವರಂತೆ ಇರಬೇಕೆಂದು ಕನ್ನಡಿಗರು ಅಭಿಮಾನದಿಂದ ಇಂದಿಗೂ ಹೇಳುತ್ತಾರೆ. ಅವರು ತಮ್ಮ ಯಶಸ್ಸಿನ ಉತ್ತುಂಗದಲ್ಲೂ ಸರಳತೆ ಕಾಯ್ದುಕೊಂಡು, ಅಭಿಮಾನಿಗಳಿಗೆ ಆದರ್ಶಪ್ರಾಯರಾದರು. ರಾಜಕುಮಾರ್ ಅವರ ಸಿನಿಮಾ ಪಾತ್ರ ಮತ್ತು ಜೀವನಶೈಲಿ ಕನ್ನಡಿಗರ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು.

ADVERTISEMENT

ರಾಜಕುಮಾರ್ ಅವರು ಕನ್ನಡಿಗರಲ್ಲಿ ‌ಕನ್ನಡ ನಾಡು ನುಡಿಯ ಪ್ರಜ್ಞೆ ಜಾಗೃತಗೊಳಿಸಿದರು. ಗೋಕಾಕ್ ಚಳುವಳಿ ನೇತೃತ್ವವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ರಾಜಕುಮಾರ್ ಅವರಿಗಿದ್ದ ಬದ್ಧತೆ ಅವರನ್ನು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುಂತೆ ಮಾಡಿತು.

ಜನಸಾಮಾನ್ಯರ ಆಶೋತ್ತರಗಳು ಮತ್ತು ಸಾಮಾಜಿಕ ಕಳಕಳಿ‌ ಚಲನಚಿತ್ರಗಳಿಂ ಅವರು ಎಲ್ಲರ ಮನಸು ಗೆದ್ದಿದ್ದಾರೆ. ಕರ್ನಾಟಕದ ಜನರಿಗೆ ಮಾದರಿ ಮತ್ತು ಆದರ್ಶ ವ್ಯಕ್ತಿ ರಾಜಕುಮಾರ್ ಆಗಿದ್ದಾರೆ ಎಂದರು.

ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಕುರಿತು ಮಾತನಾಡಿದ ಕೃಷಿ ತಜ್ಞ ಕೆ.ವಿ.ಪ್ರಭುಸ್ವಾಮಿ, ನಾಗರಿಕತೆಯೊಂದಿಗೆ ಕೃಷಿಯು ಬೆಳೆದು ಬಂದಿದೆ. ಒಂದು ದೇಶ ಕೃಷಿಯಿಂದ ಶ್ರೀಮಂತವಾಗಿದ್ದರೆ ಮಾತ್ರ ಅಂತಹ ದೇಶಕ್ಕೆ ಉಜ್ವಲ ಭವಿಷ್ಯ ಇರುತ್ತದೆ. ಆರಂಭದಲ್ಲಿ ಸಾವಯವ ಕೃಷಿಯಿತ್ತು. ಎರಡನೆಯ ಮಹಾಯುದ್ಧದ ನಂತರ ಕೃಷಿಯಲ್ಲಿ ರಾಸಾಯನಿಕ ಬಳಕೆ ಆರಂಭವಾಯಿತು ಎಂದು ತಿಳಿಸಿದರು.

ಕೃಷಿಕರು ಎಲ್ಲಾ ಬೆಳೆಗಳನ್ನು ಬೆಳೆದು ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಿಸುವುದು ಸಮಗ್ರ ಕೃಷಿಯಾಗಿದೆ. ವೈಜ್ಞಾನಿಕ ಕೃಷಿ ಕಡೆಗೆ ಗಮನ ನೀಡಬೇಕಿದೆ. ಕೃಷಿಯ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಚನ್ನವೀರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎನ್.ಯೋಗನರಸಿಂಹಮೂರ್ತಿ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಅರುಣ್‌ಕುಮಾರ್, ಮುಖ್ಯಶಿಕ್ಷಕ ವಿರೂಪಾಕ್ಷ, ಶಿಕ್ಷಕ ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.