ADVERTISEMENT

ದೇವನಹಳ್ಳಿ: ‘ನೀರು ಕೇಳಿದರೇ ಖಾಲಿ ಪೈಪ್‌ ಹಾಕಿದರು’

ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಜಲಜಾಗೃತಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 7:08 IST
Last Updated 7 ಮಾರ್ಚ್ 2023, 7:08 IST
ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಜಲಜಾಗೃತಿ ಪಾದಯಾತ್ರೆಯಲ್ಲಿ ಮುಖಂಡರು ಭಾಗಿಯಾಗಿದ್ದರು
ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಜಲಜಾಗೃತಿ ಪಾದಯಾತ್ರೆಯಲ್ಲಿ ಮುಖಂಡರು ಭಾಗಿಯಾಗಿದ್ದರು   

ದೇವನಹಳ್ಳಿ: ಸರ್ಕಾರ ಬಡವರ ಕುಡಿಯುವ ನೀರಿನ ಹೆಸರಿನಲ್ಲಿ ₹25 ಸಾವಿರ ಕೋಟಿ ಖರ್ಚು ಮಾಡಿ, ನೀರು ಕೇಳಿದರೇ ಕೇವಲ ಖಾಲಿ ಪೈಪ್ ಲೈನ್‌ ಹಾಕಿ ನಾಯಕರು ಸುಮ್ಮನಾಗಿದ್ದಾರೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌. ಆಂಜನೇಯ ರೆಡ್ಡಿ ಆರೋಪಿಸಿದರು.

ಪಟ್ಟಣದ ಬಯಲುಸೀಮೆಯ ಬರಪೀಡಿದ ಜಿಲ್ಲೆಗಳ ನೀರಿನ ಹಕ್ಕಿಗಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಜಲಜಾಗೃತಿ ಪಾದಯಾತ್ರೆಯಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾತನಾಡಿ, ಅವಿಭಾಜಿತ ಕೋಲಾರ ಜಿಲ್ಲೆಯಾದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ಅನುದಾನ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಎತ್ತಿನ ಹೊಳೆ ಎಂಬ ಅವೈಜ್ಞಾನಿಕ ಯೋಜನೆಯ ಮೂಲಕ ಜನರಿಗೆ ಕುಡಿಯುವ ನೀರಿನ ಬದಲು, ಬೆಂಗಳೂರಿನ ಕೊಳಚೆ ನೀರು ನೀಡುತ್ತಿದ್ದಾರೆ. ಎಚ್‌.ಎನ್‌.ವ್ಯಾಲಿ, ಕೆ.ಸಿ.ವ್ಯಾಲಿಗಳ ಸಂಸ್ಕರಿತ ತ್ಯಾಜ್ಯ ನೀರಿನಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಕೊಳವೆ ಬಾವಿಗಳಲ್ಲಿ ಅಪಾಯಕಾರಿ ವಿಕಿರಣ ಪೂರಿತ ಯುರೇನಿಯಂ ದಾತು ಪತ್ತೆಯಾಗಿದ್ದು, ಅಕ್ರಮ ಗಣಿಗಾರಿಕೆಯಿಂದ ಗಾಳಿ ಸೇರಿದಂತೆ ನದಿ ಪಾತ್ರಗಳು ನಾಶವಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಮುಂದೊಂದು ದಿನ ಬಯಲುಸೀಮೆ ಪ್ರದೇಶ ವಾಸಮಾಡಲಿಕ್ಕೆ ಯೋಗ್ಯವಲ್ಲದ ಮಟ್ಟ ತಲುಪಲಿದೆ. ಪಾದಯಾತ್ರೆ ಮೂಲಕ ನೀರಿನ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಯಾವುದೇ ಪಕ್ಷವಾದರು ನೀರಿಗಾಗಿ ನ್ಯಾಯ ಕೊಡುವಂತೆ ಒತ್ತಾಯ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಗಳು ನೀಡುವ ಹೆಂಡ, ಸೀರೆ, ಮೂಗುತಿ ಸೇರಿದಂತೆ ಇತರ ಆಮಿಷಕ್ಕೆ ಬಲಿಯಾಗಬೇಡಿ
ಎಂದರು.

ಇದೆ ವೇಳೆ ಚನ್ನರಾಯಪಟ್ಣಣ ಭೂಸ್ವಾಧಿನ ವಿರೋದಿ ಹೋರಾಟ ಸಮಿತಿಯ ರೈತ ಮುಖಂಡರು ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.