ADVERTISEMENT

ಬರಿದಾಗುತ್ತಿರುವ ಜಲಮೂಲ: ಜನರಲ್ಲಿ ಆತಂಕ; ಮಳೆ ನೀರು ಸಂಗ್ರಹ ಕಡ್ಡಾಯಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2019, 13:49 IST
Last Updated 21 ಮೇ 2019, 13:49 IST
ಬರಿದಾಗುತ್ತಿರುವ ಜಕ್ಕಲಮೊಡಗು ಜಲಾಶಯ
ಬರಿದಾಗುತ್ತಿರುವ ಜಕ್ಕಲಮೊಡಗು ಜಲಾಶಯ   

ದೊಡ್ಡಬಳ್ಳಾಪುರ: ‘ನಗರಕ್ಕೆ ಕುಡಿಯುವ ನೀರು ಸಬರಾಜು ಮಾಡುತ್ತಿರುವ ಜಕ್ಕಲ ಮೊಡಗು ಜಲಾಶಯ ಬರಿದಾಗಿದ್ದು ಐದಾರು ದಿನಗಳಿಗಾಗುವಷ್ಟು ಮಾತ್ರ ನೀರಿನ ಸಂಗ್ರಹ ಇದೆ. ಅಂತರ್ಜಲ ಕೊರತೆಯಿಂದ ಕೊಳವೆಬಾವಿಗಳು ಬತ್ತಿವೆ. ತೀವ್ರ ನೀರಿನ ಸಮಸ್ಯೆ ಇಂದಾಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಯವರು ನಗರಸಭೆಗೆ ಸೂಚಿಸಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ತಿಳಿಸಿದರು.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಜನಸಂಖ್ಯೆ 1 ಲಕ್ಷ ದಾಟಿದೆ. ನಗರಕ್ಕೆ 13.50 ಎಂಎಲ್‍ಡಿ ಅವಶ್ಯಕತೆ ಇದೆ. ಹಾಲಿ 5.10 ಎಂಎಲ್‍ಡಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಸರಾಸರಿ 7 ರಿಂದ 9 ದಿನಗಳಿಗೊಮ್ಮೆ ಕುಡಿಯುವ ನೀರನ್ನು ತಲಾ 51 ಎಲ್‍ಪಿಸಿಡಿಯಲ್ಲಿ ಪೂರೈಸಲಾಗುತ್ತಿದೆ. ಜಕ್ಕಲಮೊಡಗು ಜಲಾಶಯದಿಂದ ನಗರಕ್ಕೆ ಪ್ರತಿದಿನ 10 ಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದೆ.

2017-18ನೇ ಸಾಲಿನ ಎಸ್.ಎಫ್.ಸಿ ಅನುದಾನದಡಿ 14 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಇದರಲ್ಲಿ 4 ವಿಫಲಗೊಂಡಿದ್ದು ಉಳಿದ 10 ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿದೆ ಎನ್ನುತ್ತಾರೆ ನೀರು ಸರಬರಾಜು ವಿಭಾಗದ ಎಂಜಿನಿಯರ್‌ ರಾಮೇಗೌಡ.

ADVERTISEMENT

ದೂರು ಸ್ವೀಕಾರ ಕೇಂದ್ರ ಸ್ಥಾಪನೆ: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ದೂರು ಸ್ವೀಕಾರ ಕೇಂದ್ರ ಸ್ಥಾಪಿಸಲಾಗಿದೆ. ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ, ಜನಪ್ರತಿನಿಧಿಗಳಿಂದ ಸ್ವೀಕರಿಸುವ ದೂರುಗಳನ್ನು ನಿವಾರಿಸಲು ನಗರಸಭೆ ಕಚೇರಿಯಲ್ಲಿ 24/7 ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ. ಇದರ ದೂರವಾಣಿ ಸಂಖ್ಯೆ 080 7622031 ಆಗಿದ್ದು ಸಾರ್ವಜನಿಕರು ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು.

ಅಂತರ್ಜಲದ ಕುಸಿತ ಮತ್ತು ಜಕ್ಕಲಮೊಡಗು ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ನೀರಿನ ಸರಬರಾಜಿನಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ನೀರನ್ನು ಮಿತವಾಗಿ ಬಳಸಲು ಮತ್ತು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.