ADVERTISEMENT

ದೊಡ್ಡಬಳ್ಳಾಪುರ: ನಶಿಸುತ್ತಿರುವ ನೆಲಮೂಲ ಕಲೆಗಳು

ತಳ ಸಮುದಾಯ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:35 IST
Last Updated 6 ಮಾರ್ಚ್ 2023, 4:35 IST
ದೊಡ್ಡಬಳ್ಳಾಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಮೂಲ ಸಂಸ್ಕೃತಿ,ಕನ್ನಡ ಸಂಸ್ಕೃತಿ-2023 ಕಾರ್ಯಕ್ರಮವನ್ನು ಭಾನುವಾರ ರಾಜ್ಯ ಸಂಚಾಲಕ ಜಗದೀಶ್ ಹಿರೇಮನೆ ಉದ್ಘಾಟಿಸಿದರು
ದೊಡ್ಡಬಳ್ಳಾಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಮೂಲ ಸಂಸ್ಕೃತಿ,ಕನ್ನಡ ಸಂಸ್ಕೃತಿ-2023 ಕಾರ್ಯಕ್ರಮವನ್ನು ಭಾನುವಾರ ರಾಜ್ಯ ಸಂಚಾಲಕ ಜಗದೀಶ್ ಹಿರೇಮನೆ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ-2023 ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಭಾನುವಾರ ನಗರದ ಡಾ. ರಾಜ್‍ಕುಮಾರ್ ಕಲಾಮಂದಿರದಲ್ಲಿ ನಡೆಯಿತು.

ಶಿಬಿರದಲ್ಲಿ ತರಬೇತಿ ಪಡೆದ ಕಲಾತಂಡಗಳು ಕಲಾ ಪ್ರದರ್ಶನ ನೀಡಿದವು.

ತರಬೇತಿ ಹೊಂದಿದ ಕಲಾವಿದರಿಂದ ಸೋಮನ ಕುಣಿತ, ಕೋಲಾಟ, ತಮಟೆ ವಾದನ ಸೋಬಾನೆ ಪದ,ಮಹಿಳಾ ಡೊಳ್ಳುಕುಣಿತ, ಪಂಡರಿಭಜನೆ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ADVERTISEMENT

ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್‌ ಹಿರೇಮನೆ ಮಾತನಾಡಿ, ಮೂಲ ಸಂಸ್ಕೃತಿ ಪರಂಪರೆಯ ಪರಿಚಯವನ್ನು ಗೂಗಲ್‍ನಲ್ಲಿ ಹುಡುಕುವ ಸ್ಥಿತಿ ಬಂದಿದೆ. ಇಂದಿನ ಪೀಳಿಗೆಗೆ ತರಬೇತಿ ನೀಡುವ ಅಗತ್ಯವಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲ ಸಂಸ್ಕೃತಿ,ಕನ್ನಡ ಸಂಸ್ಕೃತಿ ಕಾರ್ಯಕ್ರಮ ರೂಪಿಸಿದೆ. ಈ ಮೂಲಕ ರಾಜ್ಯದ 31 ಜಿಲ್ಲೆಗಳಿಂದ 62 ಕಲಾಪ್ರಕಾರಗಳ ತರಬೇತಿ ನೀಡಲಾಗುತ್ತಿದೆ ಎಂದು
ಹೇಳಿದರು.

ತರಬೇತಿ ಪಡೆದವರು ಕಲಾ ರಾಯಬಾರಿಗಳಾಗುವ ವಿಶ್ವಾಸವಿದೆ. ಈ ಹಿಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಕಲಾವಿದರೇ ಹೆಚ್ಚಿಗೆ ಇರುತ್ತಿದ್ದರು. ಇನ್ನು ಮುಂದೆ ತರಬೇತಿ ಪಡೆದ ಈ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಬದುಕಿನ ಸಂವೇದನೆಗಳನ್ನು ಪ್ರತಿಬಿಂಬಿಸುವಲ್ಲಿ ಜನಪದ ಸಾಹಿತ್ಯ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯದ ಎರಡು ಸಾವಿರ ವರ್ಷದ ಇತಿಹಾಸದಲ್ಲಿ ಸಾವಿರ ವರ್ಷಗಳು ನಮ್ಮ ಜನಪದ ಸಾಹಿತ್ಯವೇ ತುಂಬಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸಬ್‌ ಇನ್‌ಸ್ಪೆಕ್ಟರ್‌ ಪ್ರಸನ್ನಕುಮಾರ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಶಂಕರ್ ಭಾರತೀಪುರ, ನಾಗರಾಜ್, ಕಲಾಪ್ರಕಾರಗಳ ತರಬೇತುದಾರರಾದ ಮುನಿಯಪ್ಪ, ಮುನಿಲಕ್ಷ್ಮಮ್ಮ, ಮುನಿರಾಜು, ವನಿಶಾ, ವೆಂಕಟೇಶ್, ಕಲಾವಿದರಾದ ರಾಮಚಂದ್ರ ಶ್ಯಾಕಲದೇವನಪುರ, ನಾಗರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.