ADVERTISEMENT

ದೊಡ್ಡಬಳ್ಳಾಪುರ: ಆರ್ಥಿಕ ನೀತಿ ಜನ ವಿರೋಧಿ

‘ಕಾರ್ಪೊರೇಟ್‌ ಕಂಪನಿಗಳೇ ಭಾರತ ಬಿಟ್ಟು ತೊಲಗಿ’ ಪ್ರಚಾರಾಂದೋಲನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:33 IST
Last Updated 26 ಜುಲೈ 2021, 3:33 IST
ಪ್ರಚಾರಾಂದೋಲನದಲ್ಲಿ ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿದರು
ಪ್ರಚಾರಾಂದೋಲನದಲ್ಲಿ ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ಸರ್ಕಾರದ ಆರ್ಥಿಕ ನೀತಿ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿದ್ದು ಜನವಿರೋಧಿ ಆಗಿದೆ. ‌‌ಬಹುರಾಷ್ಟ್ರೀಯ ಕಂಪನಿಗಳಿಗೆ ಸಾವಿರಾರು ಕೋಟಿ ಸಾಲ ಕೊಡುವ ಸರ್ಕಾರ ರೈತರು ಮತ್ತು ಕೂಲಿಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ಅವರು ನಗರದಲ್ಲಿ ಭಾನುವಾರ ಸಿಐಟಿಯು, ಎಐಕೆಎಸ್‌ ಹಾಗೂ ಪ್ರಾಂತ ರೈತ ಸಂಘದ ವತಿಯಿಂದ ದೇಶವ್ಯಾಪಿ ಆರಂಭವಾಗಿರುವ ಕಾರ್ಪೊರೇಟ್‌ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿಪಿಎಂ ಪಕ್ಷದ ವಿವಿಧ ರಾಜಕೀಯ ಸಂಘಟನೆಗಳು ಆರಂಭಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಫಲ್ಯ ಮತ್ತು ಜನವಿರೋಧಿ ಆರ್ಥಿಕ ನೀತಿ ವಿರುದ್ಧ ಜನಜಾಗೃತಿ ಆರಂಭಿಸಿರುವುದು ಸ್ವಾಗತಾರ್ಹ ಮತ್ತು ಸಕಾಲಿಕ. ಎಪಿಎಂಸಿ ಕಾನೂನು ರೈತರ ಬೆನ್ನೆಲುಬು ಮುರಿದರೆ ಹೊಸ ಕಾರ್ಮಿಕ ನೀತಿ ‌ಕಾರ್ಮಿಕರನ್ನು ಕೈಗಾರಿಕೋದ್ಯಮಿಗಳ ಜೀತಗಾರರಾಗಿ ಪರಿವರ್ತಿಸುತ್ತದೆ. ಕೈಗಾರಿಕೋದ್ಯಮಿಗಳ ಸಾವಿರಾರು ಕೋಟಿ ಸಾಲಮನ್ನಾ ಮಾಡುವ ಕೇಂದ್ರ ಸರ್ಕಾರ‌ ಒಂದೆರಡು ಲಕ್ಷ ಸಾಲ ಪಡೆದ ರೈತರ ಮನೆ ಜಪ್ತಿ ಮಾಡುತ್ತಿದೆ. ಪ್ರತಿವರ್ಷ ಕೋಟಿ ಕೋಟಿ ಉದ್ಯೋಗ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಕೋಟ್ಯಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಯಲ್ಲಿ ನಿಲ್ಲಿಸಿತು. ಲಕ್ಷಾಂತರ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದವು ಎಂದರು.

ADVERTISEMENT

ಬಡವರು, ಕಾರ್ಮಿಕರು ಮಾತ್ರವಲ್ಲ. ಮಧ್ಯಮ ವರ್ಗ ಕೂಡ ಬೆಲೆ ಏರಿಕೆ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಕೊರೊನಾ ಸೋಂಕಿನ ಕಾಲದಲ್ಲಿ ಅತಿ ಹೆಚ್ಚು ಲಾಭವಾಗಿದ್ದು ಕೇಂದ್ರ ಸರ್ಕಾರದ ಪ್ರಬಲ ನಾಯಕರ ಗೆಳೆಯರಾದ ಕೈಗಾರಿಕೋದ್ಯಮಿಗಳಿಗೆ. ಆರ್ಥಿಕವಾಗಿ ದುರ್ಬಲರಾದವರು ಮತ್ತಷ್ಟು ದುರ್ಬಲರಾದರು‌ ಹಾಗೂ ಸರ್ಕಾರ ನೀಡುವ ಕನಿಷ್ಠ ಸವಲತ್ತು ನೆಚ್ಚಿ ಬದುಕಬೇಕಾದ‌ ದುಸ್ಥಿತಿಯಲ್ಲಿದ್ದಾರೆ. ಇವತ್ತು ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಕೇಳಿದರೆ ಅದು ದೇಶದ್ರೋಹ ಎನಿಸುತ್ತಿದೆ ಎಂದರು.

ಇಂತಹ ‌ಕಾಲದಲ್ಲಿ ಚಳವಳಿ ನಡೆಸುವುದು ಕೂಡ ಸವಾಲಿನ ಕೆಲಸ. ಹೀಗಾಗಿ ಹಲವು ಸಂಘಟನೆಗಳು ಒಕ್ಕೂಟ ರಚಿಸಿಕೊಂಡು ಹೋರಾಡುವುದು ಅನಿವಾರ್ಯವಾಗಿದೆ. ಇದು ಚಳವಳಿಗೆ, ಪ್ರತಿಭಟನೆಗೆ ಪೂರಕ ಕಾಲವಲ್ಲ. ಎಂಬತ್ತು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂದು ವಸಾಹತುಶಾಹಿ ಆಡಳಿತದ ವಿರುದ್ಧ ನಿರ್ಣಾಯಕ ಹೋರಾಟ‌ ಆರಂಭ ಮಾಡಿದರು. ಈಗ ನಾವು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ, ಶ್ರೀಮಂತರ ಪರವಾಗಿ ಇರುವ ನಮ್ಮದೇ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.

‌ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿ.ಎಚ್‌.ರಾಮಕೃಷ್ಣ, ಸಿಐಟಿಯು ಮುಖಂಡರಾದ ಪಿ.ಎ.ವೆಂಕಟೇಶ್‌,ರೇಣುಕಾಆರಾಧ್ಯ, ನಳಿನಾಕ್ಷಿ, ಸುಮಾ, ನರೇಶ್‌ ಕುಮಾರ್‌, ಸಾದಿಕ್‌,ಗೋವಿಂದರಾಜು, ಸದಾಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.