ದೊಡ್ಡಬಳ್ಳಾಪುರ: ಬಮುಲ್‌ನಲ್ಲಿ ಹಣಕಾಸು ವಹಿವಾಟಿನ ಬಗ್ಗೆ ಇ.ಡಿ ನೋಟಿಸ್ ನೀಡಿದ್ದು, ವ್ಯವಸ್ಥಾಪಕರು ವಿವರಣೆ ನೀಡುವಂತೆ ಸೂಚಿಸಿದೆ. ಅಧಿಕಾರಿಗಳು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
‘ತನಿಖಾ ಸಂಸ್ಥೆಗಳು ಇದ್ದಾಗಲೇ ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯ. ಆದರೆ, ನಾನು ಬಮಲ್ ಅಧ್ಯಕ್ಷನಾಗಿದ್ದಕ್ಕೆ ನೋಟಿಸ್ ನೀಡಲಾಗಿದೆ ಎನ್ನುವುದು ಸುಳ್ಳು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕ್ರಮ ನಡೆಯುವ ಕಡೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಕಾರ್ಯಕರ್ತರು ಇದೇ ಕೆಲಸ ಮಾಡಲಿದ್ದಾರೆ ಎಂಬ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ಉತ್ತರಿಸಿದ ಅವರು, ‘ವಿಜಯೇಂದ್ರ ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದಷ್ಟೇ ಹೇಳಿದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದ ವೇಳೆ ಕ್ಷೇತ್ರದಲ್ಲಿನ ಹಲವು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದ್ದಾರೆ. ಬಮುಲ್ ಅಧ್ಯಕ್ಷರಾಗಿಯೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರ ಹಿತ ಕಾಪಾಡುವ ಭರವಸೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ನಿರ್ದೇಶಕ ಟಿ.ರಾಮಣ್ಣ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುನಿರಾಜು, ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಟಿಎಪಿಎಂಸಿಎಸ್ ನಿರ್ದೇಶಕ ಡಿ.ಸಿದ್ದರಾಮಣ್ಣ, ತೂಬಗೆರೆ ಬ್ಲಾಕ್ ಅಧ್ಯಕ್ಷ ರವಿಸಿದ್ದಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ ಅನಂತರಾಮ್, ಭೂ ನ್ಯಾಯಮಂಡಳಿ ಸದಸ್ಯ ಆದಿತ್ಯನಾಗೇಶ್, ಮುಖಂಡರಾದ ಅಲ್ತಾಫ್, ರಮೇಶ್, ಅಂಜನಮೂರ್ತಿ, ದೀಪು, ಬಿ.ಮುನಿರಾಜು, ಕೆಂಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.