ADVERTISEMENT

ಗ್ರಾ.ಪಂ ಮಟ್ಟದಲ್ಲಿ ಶಿಕ್ಷಣ ಪಡೆ ರಚನೆ

ಮಕ್ಕಳನ್ನು ಶಾಲೆಗೆ ದಾಖಲೆ ಮಾಡಲು, ಸಮೀಕ್ಷೆಗಾಗಿ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:55 IST
Last Updated 31 ಅಕ್ಟೋಬರ್ 2020, 4:55 IST
ಸರ್ಕಾರದ ಸುತ್ತೋಲೆಯ ಪ್ರತಿ
ಸರ್ಕಾರದ ಸುತ್ತೋಲೆಯ ಪ್ರತಿ   

ವಿಜಯಪುರ: ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆಗೆ ದಾಖಲೆ ಮಾಡಲು ಮತ್ತು ಸಮೀಕ್ಷೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ‍ಪಡೆಗಳು ರಚನೆಯಾಗಲಿವೆ. ಈ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 58ರಲ್ಲಿ ಗ್ರಾಮ ಪಂಚಾಯಿತಿ ಕಾರ್ಯಗಳ ಬಗ್ಗೆ ವಿವರಿಸಿದೆ. ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ಕಾರ್ಯಪಡೆ ರಚನೆಗೆ ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಈ ಬಗ್ಗೆ ಸುತ್ತೋಲೆ ಮೂಲಕ ಆದೇಶ ಹೊರಡಿಸಿದೆ.

ಶಿಕ್ಷಣ ಪಡೆ ಕಾರ್ಯವೇನು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ಪಡೆ ರಚನೆ ಆಗುವುದರಿಂದ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳು ಕೂಡ ಶಿಕ್ಷಣ ರಿಜಿಸ್ಟರ್ ನಿರ್ವಹಿಸಬೇಕಾಗುತ್ತದೆ. ಇದರ ಜತೆಗೆ ಮಕ್ಕಳ ಕಲಿಕೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದು, ಮಾಸ್ಕ್ ವಿತರಿಸುವುದು, ಕೈತೊಳೆಯಲು ಅಗತ್ಯವಾದ ಸಾಬೂನು, ನೀರಿನ ವ್ಯವಸ್ಥೆ ಮಾಡುವುದು, ಕೋವಿಡ್ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡು ಮಕ್ಕಳ ಕಲಿಕೆಗೆ ಅಗತ್ಯವಾದ ಸೂಕ್ತ ಸ್ಥಳಾವಕಾಶ ಕಲ್ಪಿಸುವುದು ಕಲಿಕೆಗೆ ಪೂರಕವಾಗಿ ದೂರದರ್ಶನ ಟಿ.ವಿ ವಿತರಿಸುವುದು, ವಲಸೆ ಹೋಗುತ್ತಿರುವ ಪಾಲಕರ ಮಕ್ಕಳಿಗೆ ಶಾಲೆಯಲ್ಲಿಯೇ ಉಳಿಯುವಂತೆ ಮಾಡುವುದು, ಗ್ರಾಮಗಳ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಕಾರ್ಯವಾಗಿದೆ.

ADVERTISEMENT

ಗ್ರಾಮಗಳಲ್ಲಿ ವಾಸವಿದ್ದು ಶಾಲೆಗೆ ಗೈರಾಗುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹಾಜರುಪಡಿಸುವಲ್ಲಿ ಕಾರ್ಯತಂತ್ರ ರೂಪಿಸುವುದು, 6ರಿಂದ 18ವರ್ಷದ ಮಕ್ಕಳಿಗೆ ಗ್ರಂಥಾಲಯಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಸುವುದು, 6ರಿಂದ 14ವರ್ಷದ ಮಕ್ಕಳು ಶಾಲೆಗೆ ಹೋಗುತ್ತಿರುವ ಬಗ್ಗೆ ತಪಾಸಣೆ ನಡೆಸಿ ಖಾತ್ರಿಪಡಿಸಿಕೊಳ್ಳುವುದು, ವಿಶೇಷವಾಗಿ 5ನೇ ತರಗತಿಯಿಂದ 9ತರಗತಿಗೆ ಮಕ್ಕಳು ಪ್ರವೇಶ ಪಡೆದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆಗೆ ವಿಶೇಷ ಕಾರ್ಯಕ್ರಮ ರೂಪಿಸುವ ಹೊಣೆಗಾರಿಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಸ್ತಿತ್ವಕ್ಕೆ ಬರಲಿರುವ ಶಿಕ್ಷಣ ಪಡೆಗಳ ಕಾರ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.