ADVERTISEMENT

ಎನ್‌ಕೌಂಟರ್‌: ಅತ್ಯಾಚಾರಿಗಳಿಗೆ ಎಚ್ಚರಿಕೆಯ ಪಾಠ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಅತ್ಯಾಚಾರ ಸಂತ್ರಸ್ತೆಗೆ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು
ಅತ್ಯಾಚಾರ ಸಂತ್ರಸ್ತೆಗೆ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ಹೈದರಾಬಾದ್‍ನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಪಶುವೈದ್ಯೆ ಆತ್ಮಕ್ಕೆ ಶಾಂತಿ ಕೋರಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕರವೇ ತಾಲ್ಲೂಕು ಗೌರವ ಅಧ್ಯಕ್ಷ ಪು.ಮಹೇಶ್ ಮಾತನಾಡಿ, ‘ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ಕು ಜನ ಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಅದು ಅತ್ಯಾಚಾರಿಗಳಿಗೆ ಎಚ್ಚರಿಕೆಯ ಪಾಠ. ಮೃತಪಟ್ಟ ಪಶುವೈದ್ಯೆಯ ಆತ್ಮಕ್ಕೆ ಶಾಂತಿ ಸಿಕ್ಕಿದಂತೆ ಆಗಿದೆ. ಆದರೆ ಇಂದು ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದೆ ಭಯದ ವಾತಾವರಣದಲ್ಲಿ ಜೀವಿಸಬೇಕಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ಇಲ್ಲ ಎಂದಿರುವುದು ಶ್ಲಾಘನೀಯ’ ಎಂದರು.

‘ಅಂತೆಯೇ ಅತ್ಯಾಚಾರ ಮಾಡಿದ ಯಾವೊಬ್ಬರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಸೂಕ್ತ ಕಾನೂನು ತರಬೇಕು. ಘಟನೆ ನಡೆದ 24 ಗಂಟೆಯಲ್ಲಿಯೇ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಅತ್ಯಾಚಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಬೇಕು’ ಎಂದರು.

ADVERTISEMENT

ಕರವೇ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್ ಮಾತನಾಡಿ, ‘ಇಡೀ ರಾಷ್ರ್ಟ‌ಮಟ್ಟದಲ್ಲಿ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನ ಅವರ ದಿಟ್ಟ ನಿರ್ಧಾರವನ್ನು ಸ್ವಾಗತಿಸುತ್ತಿದೆ. ಇದಕ್ಕೆ ಮತ್ತೆ ಯಾವುದೇ ಕಾನೂನು ತೊಡಕುಗಳಾಗದಂತೆ ನೋಡಿಕೊಳ್ಳಬೇಕಿದ್ದು, ಅತ್ಯಾಚಾರ ತಡೆಗಟ್ಟುವಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.

ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್ಎಲ್ಎನ್ ವೇಣು, ನಗರ ಅಧ್ಯಕ್ಷ ಶ್ರೀನಗರ ಬಷೀರ್, ನಗರ ಉಪಾಧ್ಯಕ್ಷ ಅಮ್ಮು, ನಗರ ಉಪಾಧ್ಯಕ್ಷ ಮಾರುತಿ, ಮುಖಂಡರಾದ ರವಿ ಮುಕ್ಕೇನಹಳ್ಳಿ, ಸುನೀಲ್ ಶೆಟ್ಟಿ, ರಮೇಶ್, ಹೇಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.