ಆನೇಕಲ್: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಂಜಿನಿಯರ್ ಸಭೆ ಆಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಕೆ.ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿಯು ನಡೆಯುತ್ತಿದೆ. ಮನೆ ಮನೆಗಳಿಗೆ ನೀರು ಪೂರೈಕೆ ಮಾಡಬೇಕು ಎಂಬುದು ಕಾಮಗಾರಿ ಪ್ರಮುಖ ಉದ್ದೇಶವಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಸಮಸ್ಯೆ, ನೀರಿನ ಪೈಪ್‌ಲೈನ್ ಸಮಸ್ಯೆ ಉಂಟಾಗಿದೆ. ಗುತ್ತಿಗೆದಾರರು, ಎಂಜಿನಿಯರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಗ್ರಾಮಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದರೆ ಪರ್ಯಾಯ ಜಾಗವನ್ನು ಗ್ರಾಮ ಪಂಚಾಯಿತಿಗಳು ಪರಿಶೀಲಿಸಬೇಕು. ನೀರಿನ ಪೈಪ್‌ಲೈನ್ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಮಳೆಗಾಲ ಪ್ರಾರಂಭವಾಗಿದೆ. ಕಳೆದ ಒಂದು ವಾರದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಗ್ರಾಮ ಪಂಚಾಯಿತಿಗಳು ನೀರಿನ ಪೈಪ್‌ಲೈನ್ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಚರಂಡಿಗಳಲ್ಲಿ ಪೈಪ್‌ಲೈನ್ ಇದ್ದರೆ ಅವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಮಳೆಗಾಲದಲ್ಲಿ ಮಳೆ ನೀರು ಮನೆಗೆ ನುಗ್ಗದಂತೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರು ಪ್ರತಿಯೊಂದು ಕುಟುಂಬಕ್ಕೆ ಸಿಗುವಂತೆ ಮಾಡಬೇಕು ಎಂದರು.
ಪ್ರತಿ ಗ್ರಾಮದ ಕಸ ಸಂಸ್ಕರಣೆಗೆ ಒತ್ತು ನೀಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವ್ಯವಸ್ಥಿತವಾಗಿ ಮಾಡಬೇಕು. ತ್ಯಾಜ್ಯ ನೀರು ನಿರ್ವಹಣೆಗೂ ಪಂಚಾಯಿತಿ ಕ್ರಮ ವಹಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಆದ್ಯತೆ ನೀಡಲಾಗುವುದು ಎಂದರು.
ಗ್ರಾಮೀಣ ಕುಡಿಯುವ ನೀರು ನೈಮರ್ಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರುಕ್ಕು, ದಯಾನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.