ADVERTISEMENT

ತರಕಾರಿ ಮಾರಾಟಕ್ಕೆ ಪ್ರಾಯೋಗಿಕ ಮಾರುಕಟ್ಟೆ

ಬೆಂಗಳೂರಿನ ಪದ್ಮನಾಭನಗರದಲ್ಲಿ ಸ್ಥಳ ನಿಗದಿ * ವರ್ತಕರು ಹಾಗೂ ರೈತರ ನಡುವೆ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 15:48 IST
Last Updated 17 ಏಪ್ರಿಲ್ 2020, 15:48 IST
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು   

ದೇವನಹಳ್ಳಿ: ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದೆ ಸಂಕಷ್ಟ ಎದುರಾಗಿದೆ. ಮಾರುಕಟ್ಟೆ ಹಾಗೂ ಬೇಡಿಕೆ ಸಮಸ್ಯೆ ನಿವಾರಿಸಲು ವರ್ತಕರು ಹಾಗೂ ರೈತರ ನಡುವೆ ಸಂಪರ್ಕ ಕಲ್ಪಿಸುವ ಪ್ರಾಯೋಗಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರು ಬೆಳೆದಿರುವ ತರಕಾರಿ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಒಟ್ಟುಗೂಡಿಸಿ ವಾಹನಗಳ ಮೂಲಕ ಬೆಂಗಳೂರಿನ ಪದ್ಮನಾಭನಗರದಲ್ಲಿರುವಮೈದಾನಕ್ಕೆ ಸರಬರಾಜು ಮಾಡಿದರೆ, ನೇರವಾಗಿ ವರ್ತಕರಿಗೆ ಮಾರಾಟ ಮಾಡಲು ಸೂಕ್ತ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್‌ ಅವರು ತರಕಾರಿ ಮಾರಾಟ ಮಾಡುವ ರೈತರಿಗೆ ಸೂಕ್ತ ಭದ್ರತೆ ಹಾಗೂ ವ್ಯವಸ್ಥೆಯನ್ನು ಕಲ್ಪಿಸುವ ಪ್ರಾಯೋಗಿಕ ಮಾರುಕಟ್ಟೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಅವರ ಆದೇಶದ ಮೇರೆಗೆ ಪ್ರಾಯೋಗಿಕ ಮಾರುಕಟ್ಟೆ ರೈತರಿಗೆ ಒದಗಿಸಲು ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.

ADVERTISEMENT

ರೈತರು ಹೋಬಳಿ ಮಟ್ಟದಲ್ಲಿ ಬೆಳೆದ ತರಕಾರಿ ಒಟ್ಟುಗೂಡಿಸಿ ಬೇಡಿಕೆಗೆ ಅನುಸಾರವಾಗಿ ಮಾರುಕಟ್ಟೆಗೆ ಒದಗಿಸಲು ಮುಂದಾಗಬೇಕು. ತರಕಾರಿ ಮಾರಾಟ ಮಾಡುವ ಅಂಗಡಿ ಹಾಗೂ ವರ್ತಕರ ದೂರವಾಣಿ ಸಂಖ್ಯೆಗಳನ್ನು ರೈತರಿಗೆ ನೀಡುವ ಮೂಲಕ ಉತ್ತಮ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಬೆಂಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೇದಿಕೆ ಕಲ್ಪಿಸಲಾಗುವುದು. ಈ ಪ್ರಯತ್ನದಲ್ಲಿ ಯಶಸ್ಸು ಕಂಡರೆ ಬೆಂಗಳೂರು ನಗರದಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಲು ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ತಿಳಿಸಿದರು.

ಕೃಷಿ ಚಟುವಟಿಕೆ ನಡೆಸಲು ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ಬೆಳೆದಿರುವ ಬೆಳೆಗಳನ್ನು ಮಾರಾಟ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ನಾಗರಾಜ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಹಾಂತೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.