ADVERTISEMENT

ಸ್ಕೌಟ್ಸ್‌ ಬಲದಿಂದ ಸೇವಾ ಕೆಲಸಕ್ಕೆ ಅನುಕೂಲ

ದೊಡ್ಡಬಳ್ಳಾಪುರದ ಅನಿಬೆಸೆಂಟ್ ಪಾರ್ಕ್‍ನಲ್ಲಿ 7 ದಿನಗಳ ತರಬೇತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:11 IST
Last Updated 5 ಡಿಸೆಂಬರ್ 2019, 9:11 IST
ಅನಿಬೆಸೆಂಟ್ ಪಾರ್ಕ್‍ನಲ್ಲಿ ಜಮಾಯತ್ ಉಲ್ಮಾ ಮುಸ್ಲಿಂ ಸಂಘಟನೆಯ ನೇತೃತ್ವದಲ್ಲಿ ಯುವಕರಿಗೆ ಸ್ಕೌಟ್ಸ್ ತರಬೇತಿ ನೀಡಲಾಯಿತು
ಅನಿಬೆಸೆಂಟ್ ಪಾರ್ಕ್‍ನಲ್ಲಿ ಜಮಾಯತ್ ಉಲ್ಮಾ ಮುಸ್ಲಿಂ ಸಂಘಟನೆಯ ನೇತೃತ್ವದಲ್ಲಿ ಯುವಕರಿಗೆ ಸ್ಕೌಟ್ಸ್ ತರಬೇತಿ ನೀಡಲಾಯಿತು   

ದೊಡ್ಡಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಸ್ತು, ಶ್ರದ್ಧೆ, ಸೇವಾ ಕಾರ್ಯಗಳನ್ನು ಮೆಚ್ಚಿ ದೇಶ ಸೇವೆ ಹಾಗೂ ಭಾವೈಕ್ಯತೆಯ ಉದ್ದೇಶದಿಂದ ದೇಶದಲ್ಲಿಯೇ ಪ್ರಥಮವಾಗಿ ಜಮಾಯತ್ ಉಲ್ಮಾ ಮುಸ್ಲಿಂ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಯುವಕರು ಸ್ಕೌಟ್ಸ್ ರೋವರ್ ತರಬೇತಿ ಪಡೆಯುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.

ನಗರದ ಹೊರವಲಯದ ಅನಿಬೆಸೆಂಟ್ ಪಾರ್ಕ್‍ನಲ್ಲಿ 7 ದಿನಗಳ ತರಬೇತಿಗಾಗಿ ರಾಜ್ಯದ ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಕೊಪ್ಪಳ, ಚಿತ್ರದುರ್ಗ, ರಾಯಚೂರು, ಕೋಲಾರ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಲ್ಲದೇ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 70 ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದಾರೆ.

ಸಂಘಟನೆಯ ಕುರಿತಾಗಿ ಮಾಹಿತಿ ನೀಡಿದ ಜಮಾಯತ್ ಉಲ್ಮಾ ಬೆಂಗಳೂರು ಜಿಲ್ಲೆಯ ಅಧ್ಯಕ್ಷ ಮುಪ್ತಿ ಮಹಮದ್ ಹುಸೇನ್, ಜಮಾಯತ್ ಉಲ್ಮಾ ಸಂಘಟನೆ 1919ರಲ್ಲಿ ಸ್ಥಾಪಿತವಾಗಿದೆ. ದೇಶದಿಂದ ಬ್ರಿಟಿಷರನ್ನು ಹೊರಗೋಡಿಸಿ ಸ್ವಾತಂತ್ರ್ಯ ಗಳಿಸುವ ಉದ್ದೇಶದಿಂದ ಸ್ಥಾಪಿತವಾ ಸಂಘಟನೆಯಾಗಿತ್ತು. ಸಹಸ್ರಾರು ಜನ ದೇಶಕ್ಕಾಗಿ ಮಡಿದಿದ್ದರು, ಹೋರಾಟದಿಂದ ಜೈಲು ಸೇರಿದ್ದರು. ಧರ್ಮಗುರುಗಳ ಮಾರ್ಗದರ್ಶನದಿಂದ ಸಂಘಟನೆ ಬಲವಾಗಿ ನಡೆಯುತ್ತಾ ಬಂದಿದೆ. ನಮ್ಮ ಸಂಘಟನೆ ದೇಶ ವಿಭಜನೆಯಾಗುವುದನ್ನು ಸಹ ವಿರೋಧಿಸಿತ್ತು. ಸೇವೆಯೇ ಧ್ಯೇಯ, ಹಿಂದೂ,ಮುಸ್ಲಿಂ ಈ ದೇಶದಲ್ಲಿ ಇಬ್ಬರೂ ಒಂದೇ ಎಂದು ಎಲ್ಲಾ ಧರ್ಮದವರು ಕೂಡಿ ಬಾಳುವ ನಿಟ್ಟಿನಲ್ಲಿ ದೇಶ ಸೇವೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ADVERTISEMENT

ಸ್ಕೌಟ್ಸ್ ತರಬೇತಿ: ನಾವು ಮಾಡುತ್ತಿರುವ ಕೆಲಸಕ್ಕೆ ಸ್ಕೌಟ್ಸ್‍ನ ಬಲ ಇದ್ದರೆ ಸೇವೆಗೆ ಮತ್ತಷ್ಟು ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದ ಯುವಕರಿಗೆ ಸ್ಕೌಟ್ಸ್ ತರಬೇತಿ ನೀಡಲಾಗುತ್ತಿದೆ. ನಾಯಕತ್ವದ ತರಬೇತಿ, ಜವಾಬ್ದಾರಿಯುತ ಪ್ರಜೆಯಾಗಿ ನಡೆದುಕೊಳ್ಳುವುದು ಮೊದಲಾಗಿ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಮತ್ತಷ್ಟು ಜನರನ್ನು ಸ್ಕೌಟ್ಸ್ ಸೇರಲು ಪ್ರೇರೇಪಿಸುತ್ತಿದ್ದಾರೆ.

7 ದಿನಗಳ ಶಿಬಿರದಲ್ಲಿ ಲೀಡರ್ ಟ್ರೈನರ್ ಫೆರೋಜ್ ಪಾಷಾ ತರಬೇತಿ ನೀಡುತ್ತಿದ್ದಾರೆ. ಸಂಘಟನೆಯ ರಾಜ್ಯ ಅಧ್ಯಕ್ಷ ಮುಪ್ತಿ ಇಪ್ತಿಯಾರ್ ಅಹಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಪ್ತಿ ಶಂಷುದ್ದೀನ್, ಕಾರ್ಯದರ್ಶಿ ತನ್ವೀರ್ ಅಹಮದ್ ಷರೀಫ್, ರಾಜ್ಯ ಸದಸ್ಯ ಆಸಮ್ ಅಬ್ದುಲ್ಲಾ, ಜಮಾಯತ್ ಯೂತ್ ಕ್ಲಬ್‍ನ ಇದಾಯತ್ ಉಲ್ಲಾ ಸಿದ್ದಿಕಿ ಮೊದಲಾದವರು ಆಗಮಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.